ಮೈಸೂರು : ಪ್ರತಾಪ್ ಸಿಂಹನಿಗೆ ಇತಿಹಾಸ ಗೊತ್ತಿಲ್ಲ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕೆಆರ್‌ಎಸ್ ಜಲಾಶಯವನ್ನು ಟಿಪ್ಪುಸುಲ್ತಾನ್ ಕಟ್ಟಿಸಿದ್ದು ಎಂದು ಎಲ್ಲೂ ಹೇಳಿಲ್ಲ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಿ ಅದಕ್ಕೆ ಮೊದಲು ಅಡಿಗಲ್ಲು ಹಾಕಿಸಿದ್ದು ಟಿಪ್ಪು ಎಂದು ಹೇಳಿದ್ದಾರೆ ಅಷ್ಟೇ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.
ಮಹದೇವಪುರ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಶಾಸನವನ್ನು ಕೆಆರ್‌ಎಸ್ ಜಲಾಶಯ ಕಟ್ಟಿಸಿದ ಮಹಾತ್ಮರಾದ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರೇ ಜಲಾಶಯದ ಬಳಿ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಬರೆಸಿದ್ದ ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ಬಳಿಯೇ ಹಾಕಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಷ್ಟೇ ಏಕೆ ಕರ್ನಾಟಕದಲ್ಲಿರುವ ಗೋಲ್ ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದು ಗೊತ್ತಿದೆಯಾ? ಎಂದು ಪ್ರಶ್ನಿಸಿದರು.
ಹೈದರ್ ಅಲಿಖಾನ್ ಮತ್ತು ಟಿಪ್ಪುಸುಲ್ತಾನ್ ಅವರು ಈ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಇಲ್ಲದ ಸಂದರ್ಭದಲ್ಲಿ ಚೀನಾದಿಂದ ರೇಷ್ಮೆ ಬೆಳೆಯನ್ನು ತರಿಸಿ ತನ್ನ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದರು. ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿದರು. ೧೭೮೨ರಲ್ಲಿ ಟಿಪ್ಪು ಸುಲ್ತಾನ್ ಅವರು, ಕಾವೇರಿ ನದಿಗೆ ೭೦ ಅಡಿ ಎತ್ತರದ ಅಣೆಕಟ್ಟೆ ಕಟ್ಟುವ ಮೂಲಕ ರೈತರ ಬದುಕು ಹಸನು ಮಾಡಲು ಯತ್ನಿಸಿ ಅದಕ್ಕೆ ಹಣಕಾಸು ಹೊಂದಿಸಿದ್ದರು. ಆದರೆ, ೩ ನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿ ಯುದ್ಧದ ಖರ್ಚು ೩ ಕೋಟಿ ಹಣವನ್ನು ಬ್ರಿಟಿಷರಿಗೆ ಕೊಡಲಾಗದೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.
ನಾಲ್ಕನೇ ಮೈಸೂರು-ಆಂಗ್ಲೋ ಯುದ್ಧದಲ್ಲಿ ಟಿಪ್ಪು ವೀರ ಮರಣ ಹೊಂದಿದಾಗ ಅಣೆಕಟ್ಟೆ ಕಟ್ಟುವ ಯೋಜನೆ ಇಲ್ಲದಾಯಿತು. ಆದರೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಜಲಾಶಯ ಕಟ್ಟುವ ಸಂದರ್ಭದಲ್ಲಿ ಸಿಕ್ಕ ಶಾಸನವನ್ನು ಅದೇ ಜಾಗದಲ್ಲಿ ಇರಿಸಿದ್ದರು. ನಿಮ್ಮಂತವರು ಏನಾದರೂ ಆಗ ಇದ್ದಿದ್ದರೆ ಆ ಶಾಸನವನ್ನು ಒಡೆದು ಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಟಿಪ್ಪುಸುಲ್ತಾನರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ಪ್ರತಾಪ್ ಸಿಂಹ, ಮೈಸೂರು-ಕೊಡಗು ಜಿಲ್ಲೆಯಲ್ಲಿ ೪೦-೫೦ ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂ ರಹಿತರು ಅರ್ಜಿ ನಮೂನೆ ೫೦, ೫೩, ೫೭ ರಲ್ಲಿ ತಮಗೆ ಭೂ ಒಡೆತನ ನೀಡುವಂತೆ ಸರ್ಕಾರಕ್ಕೆ ೧೦ ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯಲ್ಲೇ ಭೂ ರಹಿತ ದಲಿತರಿಗೆ, ಇತರರಿಗೆ ಭೂಮಿ ಒಡೆತನ ನೀಡಿದ್ದರೂ ಎನ್ನುವುದು ಗೊತ್ತಿಲ್ಲದಿದ್ದರೆ, ಇತಿಹಾಸ ಓದು ಎಂದು ಅಬ್ದುಲ್ ಮಜೀದ್ ಏಕವಚನದಲ್ಲೇ ತಿರುಗೇಟು ನೀಡಿದರು.
೧೩೪೦ ರಲ್ಲಿ ಹೊಯ್ಸಳರ ಕಾಲದಲ್ಲಿ ಮುಡುಕುತೋರೆ ಬಳಿ ಅಣೆಕಟ್ಟೆ ಕಟ್ಟಲಾಗಿತ್ತು, ಅದಕ್ಕೂ ಮುನ್ನ ಗಂಗರು ಪಾಂಡವಪುರದ ಬಳಿ ಅಣೆಕಟ್ಟೆ ಕಟ್ಟಿದ್ದಾರೆ. ಅದರ ಡಿಪಿಆರ್ ಕೇಳಲು ನಿನಗೆ ಆಗುತ್ತದೆಯಾ? ಪದೇ ಪದೆ ಟಿಪ್ಪುಸುಲ್ತಾನರ ಅವಹೇಳನ ಸಲ್ಲದು, ಟಿಪ್ಪು ಒಬ್ಬ ಮುಸ್ಲಿಂ ದೊರೆ ಎಂದು ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ, ಇತಿಹಾಸವನ್ನು ಬದಲಾಯಿಸಲು ಅಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾ ನಗರಪಾಲಿಕೆ ಮಾಜಿ ಸದಸ್ಯರಾದ ಸ್ವಾಮಿ, ಮೈಸೂರು ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ರಫತ್ ಖಾನ್, ಫಿರ್ದೋಸ್, ಸಫಿಯುಲ್ಲಾ ಹಾಜರಿದ್ದರು.





