Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪ್ರಸಾದ್‌ ಇಂದಿಗೂ ನಮ್ಮ ಜೊತೆ ಇದ್ದಾರೆ ಎಂದಿಗೂ ಅಮರರಾಗಿರುತ್ತಾರೆ : ಹೆಚ್‌.ವಿಶ್ವನಾಥ್‌

ಮೈಸೂರು : ರಾಜಕಾರಣ, ರಾಜಕೀಯ, ರಾಜಕೀಯದ ನಾಯಕತ್ವ ಬಹಳ ಪ್ರಮುಖವಾದದ್ದು. ಅಂತ ಪ್ರಮುಖವಾದ ಸ್ಥಾನದಲ್ಲಿ ಪ್ರಮುಖವಾದ ಹಲವಾರು ತೀರ್ಮಾನಗಳನ್ನು ತೆಗೆದುಕೊಂಡ ಶ್ರೀನಿವಾಸ ಪ್ರಸಾದ್‌ ಇಂದಿಗೂ ನಮ್ಮ ಜೊತೆ ಇದ್ದಾರೆ ಎಂದಿಗೂ ಅಮರರಾಗಿರುತ್ತಾರೆ ಎಂದು ಎಂಎಲ್‌ಸಿ ಹೆಚ್‌.ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಶ್ರೀನಿವಾಸ ಪ್ರಸಾದ್‌ ಅವರ ನೀವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಾದ್‌ ಮತ್ತು ನಾನು ೫೦ ವರ್ಷದ ಸ್ನೇಹಿತರು. ಓದಿನ ದಿನಗಳಿಂದ ರಾಜಕಾರಣದವರೆಗೂ ಒಟ್ಟಾಗಿ ಬೆಳೆದವರು ನಾವು. ಒಟ್ಟಾಗಿ ದೇಶ, ರಾಜ್ಯ, ಸಾಮಾಜದ ಬಗ್ಗೆ ಯೋಚನೆ ಮಾಡಿದವರು.

ಶ್ರೀನಿವಾಸ ಪ್ರಸಾದ್‌, ಹಲವಾರು ಸಮಾಜ ಸುಧಾರಣೆ ಕಾರ್ಯಕ್ರಮಗಳಿಗೆ ನಾಂದಿ ಹಾಡಿದವರು. ಕೇಂದ್ರದ ವಾಜಪೇಯಿ ಅವರ ಸರ್ಕಾರದಲ್ಲಿ ಶ್ರೀನಿವಾಸ ಪ್ರಸಾದ್‌ ಅವರು ಆಹಾರ ಮತ್ತು ನಾಗರೀಕ ಸರಬರಾಜು ರಾಜ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ನಾನು ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವನಾಗಿದ್ದೆ. ಆ ವೇಳೆ ಮಕ್ಕಳಿಗೆ ಬಿಸಿ ಊಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದಿಂದ ನಮಗೆ ಅಕ್ಕಿ ಮತ್ತು ಇತರೆ ಆಹಾರ ಪದಾರ್ಥಗಳ ಸರಬರಾಜಿಗೆ ಪ್ರಸಾದ್‌ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಿದ್ದರು. ಅವರ ಸಹಾಯದೊಂದಿಗೆ ಇಂದಿಗೂ ರಾಜ್ಯದಲ್ಲಿ ೮೪ಲಕ್ಷ ಮಕ್ಕಳು ಮಧ್ಯಾಹ್ನದ ಬಿಸಿ ಊಟ ಮಾಡುತ್ತಿದ್ದಾರೆ ಎಂದರು.

ಪ್ರಸಾದ್‌ ಅವರು ಹಲವಾರು ವಿನೂತ ಕಾರ್ಯಕ್ರಮಗಳ ಬಗ್ಗೆ ಯೋಚನೆ ಮಾಡುತ್ತಿದ್ದರು. ವಿಶೇಷವಾಗಿ ನಮ್ಮ ದಕ್ಷಿಣ ಭಾಗದಲ್ಲಿ ದಲಿತ ಸಮುದಾಯದ ಹಿರಿಯ ನಾಯಕರಾಗಿ, ಯಾವುದೇ ರಾಜಿಗೆ ಒಳಗಾಗದೆ ರಾಜಕಾರಣ ಮಾಡಿಕೊಂಡು ಬಂದಿದ್ದ ಧೀರೊದ್ದಾತ್ತ ನಾಯಕ ಎಂದರು.

ಬಹಳ ಜನ ಯುವಕರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟವರು ಶ್ರೀನಿವಾಸ ಪ್ರಸಾದ್‌. ಅವರ ರಾಜಕಾರಣದ ಜೀವನ ಕೂಡ ಬಹಳಾ ಜನೋಪಯೋಗಿ ಹಾಗೂ ವರ್ಣರಂಜಿತವಾಗಿತ್ತು.

ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನೋವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

Tags: