ಮೈಸೂರು: ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಪ್ರತಾಪ್ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆ ಮುನ್ನಲೆಗೆ ಬರುತ್ತಿದ್ದಂತೆ ರಾಜ ವಂಶಸ್ಥ ಯದುವೀರ್ ವಿರುದ್ಧ ಪೋಸ್ಟರ್ ಅಭಿಯಾನ ಶುರುವಾಗಿದೆ.
ರಾಜರಾಗಿರುವ ನೀವು ರಾಜರಾಗಿಯೇ ಇರಿ ಮಂತ್ರಿಯಾಗಬೇಡಿ ಎಂದು ಮನವಿ ಮಾಡಿದ್ದಾರೆ. ಯದು ರಾಜರೇ ನಿಮಗೆ ನಿಮ್ಮದೇ ಆದ ಘನತೆಯಿದೆ. ಅದನ್ನು ಮರೆತು ರಾಜಕೀಯಕ್ಕೆ ಬರಬೇಡಿ ಎಂದು ಯದುವೀರ್ ಅವರ ರಾಜಕೀಯ ಪ್ರವೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಮತ್ತೊಂದೆಡೆ ಸಂಸದ ಪ್ರತಾಪ್ ಸಿಂಹ ರಾಜರು ರಾಜಕೀಯಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ. ಇತ್ತ ರಾಜವಂಶಸ್ಥ ಯದುವೀರ್ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಇರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯದುವೀರ್ ಮುಂದಿನ ನಡೆ ಬಗ್ಗೆ ಎಲ್ಲರೂ ಕಾಯುತ್ತಿದ್ದಾರೆ.





