ಮೈಸೂರು : ನಗರದ ವಿವೇಕಾನಂದ ವೃತ್ತದಲ್ಲಿ ಅಪಘಾತ ನಡೆದು ಓರ್ವ ವ್ಯಕ್ತಿ ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ಹಾಗೂ ಇನ್ನಿತರ ಪದಾರ್ಥಗಳನ್ನು ಮಾರಾಟ ಮಾಡುವ ಯಾವುದೇ ತಳ್ಳು ಗಾಡಿಗಳು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಕೃಷ್ಣರಾಜ ಸಂಚಾರ ಠಾಣಾ ಪೊಲೀಸರಿಗೆ ಸೂಚನೆ ನೀಡಿದರು.
ಇದೇ ವೇಳೆ ನಗರ ಸಾರಿಗೆ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ಎಲ್ಲೆಂದರಲ್ಲಿ ನಿಲ್ಲುವ ಬಸ್‌ಗಳ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು, ವೃತ್ತದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಬ್ಯಾರಿಕೇಡ್ ಒಳಗೆ ಮಾತ್ರ ಪ್ರಯಾಣಿಕರನ್ನು ಇಳಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಗರಪಾಲಿಕೆ ಕ್ರಮ: ಇದೇ ವೇಳೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ತಮ್ಮ ಸಿಬ್ಬಂದಿಗಳೊಡನೆ ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ತಳ್ಳು ಗಾಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಬೇರೆಡೆಗೆ ಕಳುಹಿಸಿದರು.
ಮಾರುಕಟ್ಟೆ ಸ್ವಚ್ಛ: ಇದೇ ವೇಳೆ ವಿವೇಕಾನಂದ ವೃತ್ತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವವರಿಗೆಂದೇ ನಿರ್ಮಿಸಲಾಗಿರುವ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ ನಂತರ ಅವುಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಸ್ಥಳೀಯರಿಗೆ ತಿಳಿಸಿದರು.





