ಮೈಸೂರು : ನಕಲಿ ದಾಖಲೆಯನ್ನು ಸೃಷ್ಠಿ ಮೂಲಕ ಮುಡಾ ವಂಚಿಸಿ ಕೋಟ್ಯಾಂತರ ಬೆಲೆಯ ನಿವೇಶನ ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಎಂಬುವವರು ದೂರು ದಾಖಲಿಸಿದ್ದು, ಇದೇ ಪ್ರಕರಣದಲ್ಲಿ ಡಿಸಿ, ತಹಶೀಲ್ದಾರ್, ಉಪ ನೊಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ದೂರು ದಾಖಲಾಗಿದೆ.
ಪೊಲೀಸರಿಗೆ ದೂರು ನೀಡಿದಷ್ಟೆ ಅಲ್ಲದೆ ರಾಜ್ಯಪಾಲ, ರಾಜ್ಯ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಸ್ನೇಹ ಮಹಿಕೃಷ್ಣ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಬೇಕು. ೧೦ ದಿನಗಳ ಒಳಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿರುವುದಾಗಿ ಸ್ನೇಹ ಮಹಿಕೃಷ್ಣ ತಿಳಿಸಿದ್ದಾರೆ.