Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಐವರು ಯುವಕರ ಮೇಲೆ ಪೊಲೀಸರ ದೌರ್ಜನ್ಯ : ಪೊಲೀಸರ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

ತಿ.ನರಸೀಪುರ : ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ದಾಯಾದಿ ಕಲಹ ಆರೋಪದ ವಿಚಾರಣೆಗೆ ಐವರು ಯುವಕರನ್ನು ಪೊಲೀಸ್ ಠಾಣೆಗೆ ಕರೆದು ಯಾವುದೇ ಲಿಖಿತ ದೂರು ಇಲ್ಲದಿದ್ದರೂ ಪೊಲೀಸರು ಅಮಾನುಷವಾಗಿ ಹಲ್ಲೇ ನಡೆಸಿರುವ ಘಟನೆ ಶುಕ್ರವಾರ ನಡೆದಿದ್ದು, ಪೊಲೀಸರ ದೌರ್ಜನ್ಯದ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತೆ ದಲಿತ ಸಂಘರ್ಷ ಸಮಿತಿ ಹಾಗೂ ಸಂತ್ರಸ್ತ ಯುವಕರು ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.

ತಾಲೂಕಿನ ತುಂಬಲ ಗ್ರಾಮದ ಆನಂದ್, ಅರ್ಜುನ್, ಪೃಥ್ವಿ, ಪ್ರವೀಣ್ ಹಾಗೂ ಅಪ್ಪು ಪೊಲೀಸರಿಂದ ಹಲ್ಲೆಗೊಳಗಾದ ಯುವಕರಾಗಿದ್ದು, ಆನಂದ್ ಹಾಗೂ ಅರ್ಜುನ್ ಅವರಿಬ್ಬರ ದೇಹದ ಹಿಂಭಾಗದ ಕುಂಡಿಗಳು ಪೊಲೀಸರ ಏಟಿನಿಂದಾಗಿ ನೀಲಿಗಟ್ಟಿದ್ದು, ಪೃಥ್ವಿಯ ಬೆನ್ನು ಹಾಗೂ ಪ್ರವೀಣ್ ತೊಡೆಗೆ ತೀವ್ರತರದ ಪೆಟ್ಟು ಬಿದ್ದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ, ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಧೂಳಶೆಟ್ಟಿ, ಎ ಎಸ್ ಐ ಶಂಕರ್ ಹಾಗೂ ಇಬ್ಬರು ವೇದಗಳ ವಿರುದ್ಧ ನಂಜನಗೂಡು ಉಪ ವಿಭಾಗದ ಡಿ ವೈ ಎಸ್ ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹಲ್ಲೆಗೊಳಗಾದ ಯುವಕರು ತಿಳಿಸಿದ್ದಾರೆ.

ಪೊಲೀಸರು ದೌರ್ಜನ್ಯ ನಡೆಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ನಡೆಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಆಲಗೂಡು ಶಿವಕುಮಾರ್ ಮಾತನಾಡಿ, ಆ.೨೮ ರಂದು ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ದಯಾದಿಗಳ ಕಲಹವನ್ನು ನೆಪವಾಗಿಟ್ಟುಕೊಂಡು ವಾರಗಳ ಕಾಲ ಯುವಕರನ್ನ ಪೊಲೀಸ್ ಠಾಣೆಗೆ ಅಲೆದಾಡಿಸಿದ ಪೊಲೀಸರು ಶುಕ್ರವಾರ ಠಾಣೆಯಲ್ಲಿ ಮನಸೋಯಿಚ್ಛೆ ಥಳಿಸಿ, ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ತುಂಬಲ ಗ್ರಾಮದಲ್ಲಿನ ಐವರು ದಲಿತ ಯುವಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಅಕ್ಷಮ್ಮ್ಯವಾಗಿದೆ. ಈ ವೇಳೆ ಯುವಕರ ಜಾತಿಯನ್ನು ನಿಂದಿಸಲಾಗಿದೆ. ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಿ ಇನ್ಸ್ತ್ರ್ಪೆಕ್ಟರ್, ಸಬ್ ಇನ್ಸ್ತ್ರ್ಪೆಕ್ಟರ್, ಎ ಎಸ್ ಐ ಹಾಗೂ ಇಬ್ಬರು ವೇದಗಳ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕ್ರಮವನ್ನ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತ್ರಸ್ತ ಯುವಕ ಆನಂದ್ ಮಾತನಾಡಿ, ಏಳೆಂಟು ದಿನಗಳ ಕಾಲ ಪೊಲೀಸ್ ಠಾಣೆಗೆ ಅಲೆದಾಡಿದ ಪೊಲೀಸರು ಯಾವುದೇ ದೂರು ಇಲ್ಲದಿದ್ದರೂ ನಮ್ಮ ಮೇಲೆ ಶುಕ್ರವಾರ ಇನ್ಸ್ತ್ರ್ಪೆಕ್ಟರ್ ಧನಂಜಯ ಸೇರಿದಂತೆ ಪಿಎಸ್‌ಐ ಜಗದೀಶ್ ದೂಳಶೆಟ್ಟಿ, ಎ ಎಸ್ ಐ ಶಂಕರ್ ಹಾಗೂ ಇಬ್ಬರು ಸಿಬ್ಬಂದಿಗಳು ನಮ್ಮ ಮೇಲೆ ಮನಬಂದಂತೆ ಫೈಬರ್ ಲಾಟಿ, ಬ್ಯಾಟ್, ದೊಣ್ಣೆ ಹಾಗೂ ಇನ್ನಿತರ ವಸ್ತುಗಳಿಂದ ಹಲ್ಲೆಯನ್ನ ನಡೆಸಿದ್ದಾರೆ. ಈ ವೇಳೆ ಜಗದೀಶ ದೂಳಶೆಟ್ಟಿ ಜಾತಿಯನ್ನು ನಿಂದಿಸಿದರು. ಕುಡಿಯಲು ನೀರು ಕೊಡದೆ ನೆಲಕ್ಕೆ ನೀರು ಸುರಿದು ಬರಿಗೈನಲ್ಲಿ ವರೆಸುವಂತೆ ಹಿಂಸೆ ನೀಡಿದರು. ಅನಗತ್ಯವಾಗಿ ನಮ್ಮ ಮೇಲಾಗಿರುವ ದೌರ್ಜನ್ಯಕ್ಕೆ ಹಿರಿಯ ಅಧಿಕಾರಿಗಳು ನ್ಯಾಯವನ್ನು ನೀಡಬೇಕೆಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿ, ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಅವರು ದರ್ಪ ತೋರುವುದು, ದೌರ್ಜನ್ಯವನ್ನು ನಡೆಸುವುದನ್ನು ದಕ್ಷತೆ ಎಂದುಕೊಂಡಂತಿದೆ. ವಿಚಾರಣೆಯ ವೇಳೆ ಕನಿಷ್ಠ ಮಾನವೀಯತೆಯನ್ನು ತೋರದೆ ದಲಿತ ಯುವಕರ ಮೇಲೆ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ಹಲ್ಲೇ ನಡೆಸಿರುವ ವರ್ತನೆಯ ವಿರುದ್ಧ ಕ್ರಮವಾಗಲೇಬೇಕು. ರಾಜ್ಯದಲ್ಲಿ ದಲಿತರಿಗೆ ರಕ್ಷಣೆಯನ್ನ ನೀಡುತ್ತಾರೆ ಎಂಬ ನಂಬಿಕೆಯಿಂದ ದಲಿತರು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಹಾಗಾಗಿ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಯುವಕನ ತಾಯಿ ರಾಜೇಶ್ವರಿ, ಸೇವಾಶ್ರಯ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಆರ್.ಮಣಿಕಂಠ ರಾಜ್ ಗೌಡ, ಮುಖಂಡರಾದ ಗಾಂಧಿನಗರ ಮಂಜುನಾಥ್, ಆಲಗೂಡು ನಾಗರಾಜ ಮೂರ್ತಿ, ಶಾಂತಕುಮಾರ್, ಬಿಳಿಗೆರೆಹುಂಡಿ ಶಿವಕುಮಾರ್, ಸಿದ್ದರಾಜು, ಉಕ್ಕಲಗೆರೆ ರಾಜು, ಹೊನ್ನಯ್ಯ ಹಾಗೂ ಇತರರು ಇದ್ದರು.

Tags:
error: Content is protected !!