101 ವರ್ಷ ಪೂರೈಸಿರುವ ಪಿಕೆಟಿಬಿ ಅಂಡ್ ಸಿಡಿ ಆಸ್ಪತ್ರೆ ಕುಸಿದು ಬೀಳುವ ಮುನ್ನವೇ ಎಚ್ಚೆತ್ತರೆ ಉಳಿಯಲಿದೆ ಅಮಾಯಕರ ಜೀವ
ಕೆ ಬಿ ರಮೇಶ್ ನಾಯಕ
ಮೈಸೂರು: ಜನರಿಗೆ ದಿಢೀರನೇ ಕಾಣಿಸಿಕೊಳ್ಳುವ ಸೂಲು-ದಮ್ಮು(ಅಸ್ತಮಾ) ಎರಡು-ಮೂರು ದಿನಗಳಲ್ಲಿ ಗುಣವಾಗದಿದ್ದರೆ ಒಂದು ಬಾರಿ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ(ಸ್ಯಾನಿಟೋರಿಯಂ) ಮೆಟ್ಟಿಲು ಹತ್ತಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ಜನರ ನಂಬಿಕೆಯನ್ನು ಇಂದಿಗೂ ಉಳಿಸಿಕೊಂಡಿರುವ ಕೆಆರ್‌ಎಸ್ ರಸ್ತೆಯಲ್ಲಿರುವ ರಾಜಕುಮಾರಿ ಕೃಷ್ಣಾಜಮ್ಮಣ್ಣಿಯವರ ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆ ನೂರು ವರ್ಷಗಳನ್ನು ಪೂರೈಸಿದ್ದು, ಶತಮಾನೋತ್ಸವ ಆಚರಣೆ ಮಾಡುವುದಿರಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾಗಲೀ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯಾಗಲಿ ಅದರ ನಿರ್ವಹಣೆ ಮಾಡದೆ ಕೈ ಚೆಲ್ಲಿ ಕುಳಿತಿರುವ ಕಾರಣ ಕಟ್ಟಡ ಅಪಾಯದ ಅಂಚಿನಲ್ಲಿ ಸಿಲುಕಿದೆ.
ಮುಖ್ಯ ಕಟ್ಟಡದ ಕೆಲ ಭಾಗಗಳು ದಿನದಿಂದ ದಿನಕ್ಕೆ ಸಡಿಲಗೊಳ್ಳುತ್ತಿದ್ದು, ಕಳಚಿ ಬೀಳುವ ಸಾಧ್ಯತೆ ಇರುವುದರಿಂದ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ನಾಲ್ವಡಿ ಅವರ ಎರಡನೇ ಸಹೋದರಿ ಕೃಷ್ಣಾಜಮ್ಮಣಿ ಅವರು ಕ್ಷಯ ರೋಗಕ್ಕೆ ತುತ್ತಾಗಿ ಸಾವಿಗೀಡಾದರು. ನಂತರ ಕ್ಷಯದಿಂದ ಆರು ತಿಂಗಳಲ್ಲಿ ನಾಲ್ಕು ಜನರು ಸಾವಿಗೀಡಾಗುತ್ತಾರೆ. ಇದರಿಂದಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಿಂದಾಚೆಗಿನ ಪ್ರದೇಶದಲ್ಲಿ (ಅಂದಿನ ಮೈಸೂರು ಹೊರವಲಯ) ರಾಜಕುಮಾರಿ ಕೃಷ್ಣಾಜಮ್ಮಣಿುಯವರ ಕ್ಷಯ ಮತ್ತು ಎದೆರೋಗಗಳ ಆಸ್ಪತ್ರೆಯನ್ನು 1921ರಲ್ಲಿ ನಿರ್ಮಾಣ ಮಾಡಿದರು. ಸುಮಾರು 125ಎಕರೆ ಜಾಗದಲ್ಲಿ ವಿಶಾಲವಾಗಿ ನಿರ್ಮಾಣಗೊಂಡ ಆಸ್ಪತ್ರೆಯ ಕಟ್ಟಡದಲ್ಲಿ ಶ್ವಾಸಕೋಶ ಶಾಸ್ತ್ರವಿಭಾಗ, ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗವನ್ನು ತೆರೆದು ಪ್ರತಿನಿತ್ಯ ನೂರಾರು ಒಳ ಮತ್ತು ಹೊರರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. 2020ರ ನ.18 ಕ್ಕೆ 101ವರ್ಷ ಪೂರೈಸಲಿರುವ ಈ ಆಸ್ಪತ್ರೆಯನ್ನು ಕಾಲಕಾಲಕ್ಕೆ ನಿರ್ವಹಣೆ, ದುರಸ್ತಿ ಮಾಡದ ಕಾರಣ ಸಮಸ್ಯೆಗಳು ಬೆನ್ನಿಗೆ ಅಂಟಿಕೊಂಡಿವೆ.
ಅಲ್ಲಲ್ಲಿ ಬಿರುಕು : ಆಸ್ಪತ್ರೆಯ ಮುಖ್ಯಕಟ್ಟಡದಲ್ಲಿ ಹೊರ ಭಾಗದ ಗೋಡೆಯ ಗಾರೆ, ಸೆಲ್ಲಾರ್‌ಗಳ ಗಾರೆ ಉದುರುತ್ತಿದೆ. ಕಟ್ಟಡದ ಚಾವಣಿಯ ಗೋಪುರದ ಹೆಂಚುಗಳು ಒಡೆದಿವೆ, ಕಿಟಕಿಗಳು ಬೀಳುವ ಸ್ಥಿತಿಯಲ್ಲಿವೆ. ಗಿಡಗಂಟಿಗಳು ಬೆಳೆದುನಿಂತಿದೆ. ಮಹಿಳೆಯರ ವಾರ್ಡಿನ ಗೋಡೆಯಲ್ಲಿ ಮಳೆ ನೀರು ಜಿನುಗುವುದರಿಂದ ಪಾಚಿ ಕಟ್ಟಿಕೊಂಡಿದ್ದು, ಈ ಜಾಗದಲ್ಲೇ ವಿದ್ಯುತ್ ಸಂಪರ್ಕದ ಪೈಪ್‌ಗಳು ಇವೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪುರುಷರ ವಿಭಾಗದ ಕೊಠಡಿಯ ಅಲ್ಲಲ್ಲಿ ಸುಣ್ಣದ ಗಾರೆ ಉದುರುತ್ತಿದೆ. ಮಹಿಳೆಯರ ತುರ್ತು ಚಿಕಿತ್ಸಾ ವಿಭಾಗದ ಕೊಠಡಿಯಲ್ಲಿ ಆಗಾಗ ಸಣ್ಣಪುಟ್ಟ ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಅದು ಇನ್ನಷ್ಟು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಕಿಟಕಿ-ಬಾಗಿಲುಗಳ ಗಾಜುಗಳು ಒಡೆದು ಹೋಗಿವೆ. ಕಟ್ಟಡದ ಬಹಳಷ್ಟು ಕಡೆ ಗೋಡೆಗಳಲ್ಲಿ ತೇವಾಂಶ ಏರಿ ಆಪಾಯಕ್ಕೆ ದಾರಿ ಮಾಡಿಕೊಟ್ಟಿದೆ.
4.6 ಕೋಟಿ ರೂ. ಅನುದಾನ: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಪುನರ್ ನವೀಕರಣಕ್ಕಾಗಿ ರಾಜ್ಯ ಸರ್ಕಾರ ನೀಡಿರುವ 89 ಕೋಟಿ ರೂ. ಅನುದಾನದಲ್ಲಿ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಗೂ 4.6 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಆದರೆ, ಈ ಅನುದಾನ ಬಂದು ಟೆಂಡರ್ ಕರೆದು ಕಾಮಗಾರಿ ಶುರು ಮಾಡಲು ಬಹಳಷ್ಟು ಕಾಲ ಹಿಡಿಯುವುದರಿಂದ ಕೆಲ ಭಾಗಗಳಲ್ಲಿ ತುರ್ತಾಗಿ ದುರಸ್ತಿ ಮಾಡಿಸಬೇಕಾಗಿದೆ. ಮುಖ್ಯಕಟ್ಟಡದ ನವೀಕರಣಕ್ಕಾಗಿ 4.6 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದರೂ ಅದು ಸಾಲುವುದಿಲ್ಲ. ಒಟ್ಟಾರೆ ದುರಸ್ತಿಗೆ ಅಂದಾಜು 15 ರಿಂದ 20ಕೋಟಿ ರೂ. ಬೇಕಾಗಬಹುದೆಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ಹೇಳಿದರು.
125 ಎಕರೆಯಿಂದ 75 ಎಕರೆಗೆ ಇಳಿದ ವಿಸ್ತೀರ್ಣ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 125 ಎಕರೆ ಪ್ರದೇಶದಲ್ಲಿ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತಾದರೂ ಈಗ 75 ಎಕರೆಗೆ ಬಂದು ನಿಂತಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್, ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಇಲ್ಲಿರುವ ಜಾಗವನ್ನು ಬಳಸಿಕೊಂಡಿರುವ ಕಾರಣ ಪಿಕೆಟಿಬಿ ಆಸ್ಪತ್ರೆಗೆ 75 ಎಕರೆ ಮಾತ್ರ ಉಳಿದಿದೆ.
ಮುಖ್ಯಕಟ್ಟಡದಲ್ಲಿ ಒಂದಷ್ಟು ದುರಸ್ತಿ ಕೆಲಸ ನಡೆಯಬೇಕಿದೆ. ಆಸ್ಪತ್ರೆಗೆ ಮೂಲ ಸೌಕರ್ಯಗಳ ಕೊರತೆ, ವೈದ್ಯರು, ಸಿಬ್ಬಂದಿ ಸಮಸ್ಯೆ ಇಲ್ಲ. ಕಟ್ಟಡವನ್ನು ನವೀಕರಣ ಮಾಡಿದರೆ ಮುಂದಿನ ನೂರು ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡಬಹುದಾಗಿದೆ.
-ಡಾ.ಸಿ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕರು, ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ.
ಟಿಬಿ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಕಾರಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿಸಿರುವ ಸ್ಯಾನಿಟೋರಿಯಂ ಕಟ್ಟಡವನ್ನು ಸಂರಕ್ಷಿಸಿ ಉಳಿಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಪಿಕೆಟಿಬಿ ಆಸ್ಪತ್ರೆಯು ಇದೆ. ಇಟ್ಟಿಗೆ, ಗಾರೆ, ಕಲ್ಲು, ಮದ್ರಾಸ್ ಆರ್‌ಸಿಸಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ತುರ್ತಾಗಿ ಸಂರಕ್ಷಿಸಬೇಕಿರುವ ಕಟ್ಟಡಗಳಲ್ಲಿ ಪಿಕೆಟಿಬಿಯೂ ಒಂದಾಗಿದೆ.
-ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞರು.





