ಮೈಸೂರು: ಪತಿಯ ಸಾವಿನಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಜೊತೆಗೆ ಮಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೀತಾ(40) ಮಗಳು ಪೂರ್ಣಿಮ(15) ಮೃತ ದುರ್ದೈವಿಗಳು.
ಪತಿ ರಾಜನಾಯಕ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿಯ ಅಗಲಿಕೆಯಿಂದ ಖಿನ್ನತೆಗೆ ಜಾರಿದ್ದ ಪತ್ನಿ ಪತಿಯ ಗುಂಗಿನಿಂದ ಹೊರ ಬಂದಿರಲಿಲ್ಲ. ತವರು ಮನೆಯವರು ಎಷ್ಟೇ ಸಂತೈಸಿದರು ಪತಿಯ ಗುಂಗಿನಿಂದ ಹೊರಬರದ ಗೀತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ತಾಯಿಯ ಅಗಲಿಕೆ ಸುದ್ದಿ ತಿಳಿದ ಮಗಳು ಪೂರ್ಣಿಮ ಕೂಡ ಆತ್ಮಹತ್ಯೆ ಮಾಡಿಕೊಂಡು ತಾಯಿಯ ಮಡಿಲು ಸೇರಿದ್ದಾಳೆ.
ತಾಯಿ-ಮಗಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.