ಮೈಸೂರು: ದೆಹಲಿಯ ಸಂಸತ್ ಭವನದ ಕಲಾಪದ ವೇಳೆ ಸ್ಮೋಕ್ ಬಾಂಬ್ ಹಾಕಿದ್ದ ಆರೋಪದಡಿ ಬಂಧಿತನಾಗಿರುವ ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಇಂದು ಓರ್ವ ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡವಾದ ಐಬಿ ಮತ್ತು ದೆಹಲಿಯ ಪೊಲೀಸರು ಇಂದು ಭೇಟಿ ನೀಡಿದ್ದು, ದೀರ್ಘಾವಧಿ ತಪಾಸಣೆ ನಡಸಿದ್ದಾರೆ.
ಮನೆಯಿಂದ ಹೊರಗೆ ಹೋಗಿದ್ದ ಮನೋರಂಜನ್ ತಂದೆ ದೇವರಾಜೇಗೌಡ ಮಧ್ಯಾಹ್ನದ ವೇಳೆಗೆ ಮನೆಗೆ ಬರುವ ಈ ಮೊದಲೇ ಮನೋರಂಜನ್ ರೂಂ ಸೀಜ್ ಮಾಡಿದ್ದ ಪೊಲೀಸರು, ಕೊಠಡಿ ತೆರೆದು ಇಂಚಿಂಚು ಪರಿಶೀಲನೆ ಮಾಡಿದ್ದಾರೆ.
ಮನೋರಂಜನ್ ಪೋಷಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸ್ರು, ತಂದೆ ತಾಯಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದು, ಇಬ್ಬರಿಗು ಮೈಸೂರನ್ನು ತೊರೆಯದಂತೆ ಸೂಚನೆ ನೀಡಿದ್ದಾರೆ.
ಸಾಗರ್ ಶರ್ಮ ನಿಮಗೆ ಪರಿಚಯ ಇದ್ದಾನಾ. ಸಾಗರ್ ಮತ್ತು ನಿಮ್ಮ ಮಗನಿಗೆ ಹೇಗೆ ಪರಿಚಯ, ಸಾಗರ್ ಒಬ್ಬನೇ ಬಂದಿದ್ನಾ, ನಿಮ್ಮ ಮಗ ಎಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ್ದ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಮನೋರಂಜನ್ ಪೋಷಕರಿಗೆ ಕೇಳಿದ್ದಾರೆ.
ಒಂದಷ್ಟು ಮಹತ್ವದ ಮಾಹಿತಿಯನ್ನ ಸಂಗ್ರಹಿಸಿದ ಐಬಿ ಮತ್ತು ದೆಹಲಿ ಪೊಲೀಸರು, ಮನೋರಂಜನ್ ರೂಂ ನಲ್ಲಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆಯೇ ಮೈಸೂರಿಗೆ ಬಂದ ಪೊಲೀಸರ ತಂಡ ಸಂಜೆ 6.30 ವರಗೆ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.