ಮೈಸೂರು: ರಸ್ತೆ ಅಗಲೀಕರಣದ ನೆಪಹೇಳಿ ರಾತ್ರೋರಾತ್ರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಲು ಸಾಲು ಮರಗಳಿಗೆ ಕೊಡಲಿ ಬಿದ್ದಿದೆ.
ನಗರದ ಎಸ್ಪಿ ಕಚೇರಿ ಪಕ್ಕದ ರಸ್ತೆಯ ಉದ್ದಕ್ಕೂ ಇದ್ದ ಸುಮಾರು 40ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ಸಾರ್ವಜನಿಕರ ಕಣ್ಣು ತಪ್ಪಿಸಿ ಅರಣ್ಯ ಇಲಾಖೆ ಮರಗಳನ್ನು ಕಡಿದು ಹಾಕಿರುವ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಯಾರು ಇಲ್ಲದ ವೇಳೆ ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಲಾಗಿದ್ದು, ಆ ರಸ್ತೆ ಸಂಪೂರ್ಣ ಬಂದ್ ಆಗಿದೆ. ನೆಲಕ್ಕುರುಳಿದ ಬೃಹತ್ ಮರಗಳನ್ನು ನೋಡಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಾರ್ವಜನಿಕರು ಒಣಗಿರುವ ಮರಗಳನ್ನ ಕಟಾವು ಮಾಡದೇ ಚೆನ್ನಾಗಿರುವ ಮರಗಳನ್ನೇಕೆ ನಾಶ ಮಾಡುತ್ತೀರಿ. 40ಕ್ಕೂ ಹೆಚ್ಚು ಮರಗಳಲ್ಲಿ ವಾಸವಿದ್ದ ಪಕ್ಷಿಗಳ ಗತಿಯೇನು ಎಂದು ಪ್ರಶ್ನಿಸಿ, ಮೈಸೂರಿಗೆ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.