Mysore
19
overcast clouds
Light
Dark

ಶೋಷಿತ ಸಮುದಾಯಗಳ ಪರ ನಮ್ಮ ಸರ್ಕಾರ ಇರಲಿದೆ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ಶೋಷಿತ ಸಮುದಾಯದ ಏಳಿಗೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಸಾಮಾಜಿಕ ಮತ್ತು ಆರ್ಥಿಕ ಸಬಲತೆಗಾಗಿ ಸರ್ಕಾರವು ಸಮುದಾಯದ ಪರ ಸದಾ ಇರಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಎಂದು ಭರವಸೆ ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಕಲಾಮಂದಿರಲ್ಲಿ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ನುಲಿಯ ಚಂದಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಚಿವರು ಮಾತನಾಡಿದರು.

ಸಮಾನತೆ ಹಾಗೂ ಸಮಾನ ಅವಕಾಶಗಳು ಸಂವಿಧಾನದ ಆಶಯವಾಗಿದೆ. ಅದನ್ನು ಸಾಕಾರಗೊಳಿಸುವುದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿ, ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವುದೇ ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.

ಹನ್ನೆರಡೇ ಶತಮಾನದ ಶರಣ ಚಳುವಳಿಯನ್ನ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳನ್ನು ಪ್ರತಿಪಾದನೆ ಮಾಡುತ್ತ ವೈದಿಕಶಾಹಿಗಳು ಶ್ರಮಜೀವನಕ್ಕೆ ಒಗ್ಗದೆ ಕಾಯಕ ಸಮುದಾಯಗಳಲ್ಲಿ ಮೂಢನಂಬಿಕೆ ಬಿತ್ತು, ಅನೇಕ ಸಂಪ್ರದಾಯಗಳನ್ನು ಹೇರಿದರು. ಇದರ ವಿರುದ್ಧ ಬಸವಣ್ಣನವರು ಹೋರಾಟ ನಡೆಸಿದರು ಎಂದರು.

ಮೂಲಭೂತವಾದ ಮತ್ತು ಮೂಢನಂಬಿಕೆ ವಿರುದ್ಧ ಚಳುವಳಿಯನ್ನು ಹುಟ್ಟುಹಾಕಿದ ಬಸವಣ್ಣನ ಸಮಕಾಲಿನವರಾದ ನುಲಿಯ ಚಂದಯ್ಯ ಅವರು ಶ್ರಮ ಹಾಗೂ ಕಾಯಕ ಸಂಸ್ಕೃತಿಯನ್ನು ನಂಬಿದವರು. ಸದಾ ಕಾಯಕ ಮತ್ತು ದಾಸೋಹ ಪರಿಕಲ್ಪನೆಯಲ್ಲಿ ತನ್ಮಯರಾಗಿದ್ದರು. ಸಮಸಮಾಜದ ನಿರ್ಮಾಣ ಮಾಡಲು ಸಾಮಾಜಿಕ ಪಿಡುಗು ಹಾಗೂ ಮೂಢನಂಬಿಕೆ ವಿರುದ್ಧ ಜನರಿಗೆ ಅರಿವು ಮೂಡಿಸಿದರು ಎಂದು ಹೇಳಿದರು.

ಭಾರತವು ಅನೇಕ ಧರ್ಮ, ಭಾಷೆ, ವೈವಿಧ್ಯವಾದ ಆಚಾರದ ವಿಚಾರದ ನಡುವೆ ಏಕತೆಯನ್ನು ಕಾಣುತ್ತ ಬಂದಿದೆ. ಈ ದೇಶದ ಮೂಲನಿವಾಸಿಗಳು ದಲಿತರು‌. ಈ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿಗೆ ಸಂವಿಧಾನವಿದೆ. ಇದರೊಂದಿಗೆ ಅನುಭವ ಮಂಟಪದ ವಿಚಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನಿರುವುದು ನಿಮಗಾಗಿ, ನೀವಿರುವುದು ನಮಗಾಗಿ, ನಾಡಿರುವುದು ನಮಗಾಗಿ ಎಂಬ ಸಂದೇಶದಂತೆ ಯುವಕರು ಶರಣರ ಸಾಹಿತ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದರು.

ಶ್ರೀ ಕುಂದೂರು ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶರತ್ ಚಂದ್ರಸ್ವಾಮಿಗಳು ಮಾತನಾಡಿ, ಸುಮಾರು 70 ವರ್ಷ ನುಲಿಯ ಚಂದಯ್ಯ ನವರು ಬದುಕಿದ್ದರೂ ಅವರ ಇಡೀ ಜೀವನ ಕಾಯಕದಲ್ಲೇ ಮುಳುಗಿತ್ತು. ಲಿಂಗವು ಮುಖ್ಯವಲ್ಲ ಕಾಯಕದ ಮುಂದೆ ಅಂತಹ ಕಾಯಕಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟ ಮಹಾನ್ ನಾಯಕನ ಸಮಾಜಕ್ಕೆ ನಾವು ನೀವೆಲ್ಲರೂ ಸೇರಿದ್ದೇವೆ ಎಂದು ಹೇಳಿದರು.

ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬ್ರಹ್ಮ ಮಠದ ಪೀಠಾಧಿಪತಿಗಳಾದ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡಿದರು.

ಕಾರ್ಯಕ್ರಮದಲ್ಲಿ ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯವಹಿಸಿದ್ದರು ಮಾಜಿ ಶಾಸಕ ಜಿ.ಚಂದ್ರಣ್ಣ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಎಕೆಎಂಎಸ್ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಕೃಷ್ಣದೇವರಾಯ ವಿ.ವಿ. ಕುಲಪತಿ ಎನ್.ಮುನಿರಾಜು, ನಿವೃತ್ತ ಜಿಲ್ಲಾಧಿಕಾರಿ ಎಸ್.ಟಿ.ಅಂಜನ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.