ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿರುವ ನೂರಕ್ಕೂ ಹೆಚ್ಚು ವರ್ಷದ ಹಳೆಯ ಮರದ ಸುತ್ತ ಇದ್ದ ಕಟ್ಟೆ ದುರಸ್ತಿಯ ನೆಪದಲ್ಲಿ ಮರವನ್ನೇ ಕಡಿಯಲು ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಪರಿಸರ ಪ್ರೇಮಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕತ್ತರಿಸಿದ ಮರದ ಬೇರನ್ನು ಹಿಡಿದ ಪ್ರತಿಭಟನಾಕಾರರು, ನಗರಪಾಲಿಕೆ ಅಽಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಇತಿಹಾಸವಿರುವ ಬೃಹದಾಕಾರದ ಮರದ ಬುಡಕ್ಕೆ ಕೊಡಲಿ ಪೆಟ್ಟು ನೀಡಿರುವುದು ಅತ್ಯಂತ ಬೇಸರದ ಸಂಗತಿ. ಈ ಬಗ್ಗೆ ಕೇಳಲು ಹೋದರೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದನ್ನು ಪಾರಂಪರಿಕ ವೃಕ್ಷ ಎಂದು ಘೋಷಿಸಬೇಕು. ಅನಾವಶ್ಯಕ ಕಾಮಗಾರಿಗಳನ್ನು ಕೈಬಿಟ್ಟು ಮರಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಜೀವಧಾರ ರಕ್ತ ನಿಧಿ ಕೇಂದ್ರದ ಗಿರೀಶ್, ಯುವ ಮುಖಂಡರಾದ ಹರೀಶ್‌ಗೌಡ, ಮಂಜುನಾಥ್ ಗೌಡ , ಸಂದೇಶ್, ರವಿಚಂದ್ರ, ಎಸ್.ಎನ್.ರಾಜೇಶ್, ನೀತು, ಸಂತೋಷ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





