Mysore
30
broken clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ: ಟಿ.ನರಸೀಪುರ ಬಂದ್‌ ಮಾಡಲು ಚಿಂತನೆ

ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ ಪ್ರತಿಭಟನೆ ಯೊಂದಿಗೆ ತಿ.ನರಸೀಪುರ ಬಂದ್ ಮಾಡಲು ಚಿಂತನೆ ನಡೆದಿದೆ.

ಪಟ್ಟಣದ ಕೆಎಸ್ ಐಸಿ ಆವರಣದಲ್ಲಿ 6 ಕೋಟಿ ರೂ.ಗಳ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಕಂದಾಯ ಇಲಾಖೆ ಭೂಮಿಯನ್ನು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುತ್ತಿದ್ದಂತೆ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡದಂತೆ ಕಾರ್ಮಿಕರು, ಪರಿಸರವಾದಿಗಳು ಸೇರಿದಂತೆ ಹಲವಾರು ಸಂಘಟನೆಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿವೆ.

ಕಳೆದ ನಾಲ್ಕು ದಿನಗಳಿಂದ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳದೇ ಆವರಣದಲ್ಲೇ ಮೌನ ಪ್ರತಿಭಟನೆ ಮಾಡುತ್ತಿದ್ದು, ನೂಲು ತೆಗೆಯುವ ಘಟಕ ಸ್ಥಗಿತಗೊಂಡಿದೆ.

ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿರುವ 5 ಎಕರೆ ಭೂಮಿಯಲ್ಲಿ 500 ಕ್ಕೂ ಹೆಚ್ಚು ಬೆಲೆ ಬಾಳುವ ಮರಗಳು,ಪ್ರಾಣಿ ಪಕ್ಷಿಗಳು ವಾಸವಾಗಿದ್ದು,ಕ್ರೀಡಾಂಗಣ ನಿರ್ಮಿಸಲು ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ಹಾನಿ ಉಂಟಾಗುವ ಜೊತೆಗೆ ಬಾಯ್ಲರ್ ಶಾಖದಲ್ಲಿ ಕೆಲಸ ಮಾಡಿ ಬಂದ ಕಾರ್ಮಿಕರಿಗೆ ತಣ್ಣನೆಯ ಗಾಳಿ ಇಲ್ಲದಂತಾಗುತ್ತದೆ. ಹಾಗಾಗಿ ನೂರಾರು ಕಾರ್ಮಿಕರ ಭವಿಷ್ಯ ಬೀದಿಗೆ ಬೀಳುತ್ತದೆ ಹಾಗಾಗಿ ಕ್ರೀಡಾಂಗಣ ನಿರ್ಮಿಸಲು ಗುರುತಿಸುವ ಜಾಗ ಸೂಕ್ತವಾಗಿಲ್ಲವಾದ್ದರಿಂದ ಈ ಜಾಗವನ್ನು ಕೈ ಬಿಟ್ಟು ಬೇರೆಡೆ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಿಸಲಿ ಎಂದು ಪರಿಸರವಾದಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ನಡುವೆ ಇಂದು ಮೈಸೂರು ಹಾಗು ಚನ್ನಪಟ್ಟಣ ಸಿಲ್ಕ್ ಫಿಲೇಚರ್ ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಕೆಲಸ ಸ್ಥಗಿತಗೊಳಿಸಿ ಧರಣಿ ಕುಳಿತಿರುವ ಇಲ್ಲಿನ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ,ತಾವೂ ಧರಣಿಯಲ್ಲಿ ಪಾಲ್ಗೊಂಡರು.

ಮತ್ತೊಂದೆಡೆ ಕರ್ನಾಟಕ ಪರಿಸರ ಬಳಗದ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಹಾಗು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಸಹ ಫ್ಯಾಕ್ಟರಿ ಕಾರ್ಮಿಕರ ಬೆಂಬಲಕ್ಕೆ ಆಗಮಿಸಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದು ಬೇಡ, ಕಾರ್ಮಿಕರೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಕಾರ್ಮಿಕರ ಬದುಕು ಕಿತ್ತುಕೊಳ್ಳಲು ಹೊರಟಿರುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಮಾಡುವಂತೆ ಕರೆ ನೀಡಿದರು.ಟಿ.ನರಸೀಪುರ ಸಿಲ್ಕ್ ಫ್ಯಾಕ್ಟರಿಯಲ್ಲಿ ರೇಷ್ಮೆ ಸೀರೆ ತಯಾರಿಸಲು ನೂಲುಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಇಲ್ಲಿ‌ ಕ್ರೀಡಾಂಗಣ ನಿರ್ಮಿಸುವುದರಿಂದ ಕಾರ್ಮಿಕರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೈಸೂರು ರೇಷ್ಮೆ ಸೀರೆಗೆ ದೇಶ ವಿದೇಶಗಳಲ್ಲಿ ತೀವ್ರವಾದ ಬೇಡಿಕೆ ಇದೆ.ಘಟಕ ಮುಚ್ಚುವುದರಿಂದ ನೂರಾರು ಮಂದಿ ಕಾರ್ಮಿಕರು ಮತ್ತು ಅವರ ಮಕ್ಕಳ ಭವಿಷ್ಯ ಡೋಲಾಯಮಾನ ಪರಿಸ್ಥಿತಿಗೆ ಹೋಗುತ್ತದೆ. ನೂಲಿನ ಉತ್ಪಾದನೆ ನಿಂತರೆ ರೇಷ್ಮೆ ಸೀರೆ ನೇಯ್ಗೆಯ ಮೇಲೆ ತೀವ್ರ ಪರಿಣಾಮವಾಗಿ ರೇಷ್ಮೆ ಸೀರೆ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ.ಹಾಗಾಗಿ ಎಲ್ಲರೂ ಸೇರಿ ಮೈಸೂರು ಮಹಾರಾಜರು ನಿರ್ಮಾಣ ಮಾಡಿರುವ ಈ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಸಂಘಟೊತ ಹೋರಾಟದ ಅವಶ್ಯಕತೆ ಇದೆ ಎಂದರು.

ತಿ.ನರಸೀಪುರ ಬಂದ್‌ಗೆ ಕರೆ:
ಕೆಎಎಸ್‌ಐಸಿ ಆವರಣದಲ್ಲಿ ‌ಕ್ರೀಡಾಂಗಣ ನಿರ್ಮಿಸುವ ಮೂಲಕ ಉದ್ಯಮವನ್ನೇ ಮುಚ್ಚಲು ಹೊರಟಿರುವ ಸರ್ಕಾರದ ಗಮನ ಸೆಳೆಯಲು ಕಾರ್ಮಿಕರೆಲ್ಲರೂ ಸಭೆ ಸೇರಿ ತಿ.ನರಸೀಪುರ ಪಟ್ಟಣದ ಜನತೆಯ ಮನವೊಲಿಸಿ ಟಿ.ನರಸೀಪುರ ಬಂದ್ ಮಾಡುವ ಕೆಲಸ ಮಾಡಬೇಕಿದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸಲಹೆ ನೀಡಿದರು.ಕಾರ್ಮಿಕರಿಹೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ತಾವು ಸಿದ್ದರಿದ್ದು,ಎಲ್ಲರೂ ಸೇರಿ ರೇಷ್ಮೆ ಉದ್ಯಮವನ್ನು ಉಳಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕಾರ್ಮಿಕರಿಗೆ ವ್ಯಾಪಕ ಬೆಂಬಲ:
ಕಳೆದ ಮೂರು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಕ್ರೀಡಾಂಗಣ ನಿರ್ಮಾಣ ಮಾಡಲು ವಿರೋಧ ವ್ಯಕ್ತ ಪಡಿಸಿ ಆವರಣದಲ್ಲಿ ಅಡುಗೆ ಮಾಡಿ ಅಲ್ಲೇ ಊಟ ಮಾಡುತ್ತಿರುವ ಕಾರ್ಮಿಕರ ಬೆಂಬಲಕ್ಕೆ ಅನೇಕ ರಾಜಕೀಯ ಮುಖಂಡರು, ಪರಿಸರವಾದಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕೆಎಸ್ ಐಸಿಗೆ ಆಗಮಿಸಿ ಕಾರ್ಮಿಕರಿಗೆ ಬೆಂಬಲ ನೀಡಿದ್ದ ಪ್ರತಾಪ್ ಸಿಂಹ ಹಾಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಕಾರ್ಮಿಕರ ಹೋರಾಟದಲ್ಲಿ‌ ಕೊನೆವರೆಗೂ ಕರುವ ಭರವಸೆ ನೀಡಿ, ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಕಾರ್ಮಿಕರಿಗೆ ನೈತಿ ಸ್ಥೈರ್ಯ ತುಂಬುವ ಕೆಲಸ ಮಾಡಿ ಹೋಗಿದ್ದರು. ಪುರಸಭೆ ಮಾಜಿ ಸದಸ್ಯ ಅರ್ಜುನ್ ರಮೇಶ್, ಡಾ.ರೇವಣ್ಣ, ಮಾಜಿ‌ ಶಾಸಕ ಎಂ.ಅಶ್ವಿನ್ ಕುಮಾರ್, ಸೇರಿದಂತೆ ಅನೇಕ ಮುಖಂಡರು ಕಾರ್ಮಿಕರಿಗೆ ಬೆಂಬಲ ಸೂಚಿಸಿದ್ದಾರೆ.

ತೋಟದಪ್ಪ ಬಸವರಾಜುರಿಂದ ಆಮರಣಾಂತ ಉಪವಾಸ:
ಮತ್ತೊಂದೆಡೆ ಕೆಎಸ್ ಐಸಿ ಕಾರ್ಖಾನೆ ಆವರಣದಲ್ಲಿ ನಿರ್ಮಾಣ ಮಾಡಬೇಕೆಂದಿರುವ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಹಿರಿಯ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಕಾರ್ಖಾನೆ ಮುಂಭಾದ ಗೇಟ್ ಬಳಿ ಆಮರಣಾಂತ ಉಪವಾಸ ಆರಂಭಿಸಿದರು.

ತನ್ನಿತರೆ ಸ್ನೇಹಿತರೊಂದಿಗೆ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ ತೋಟದಪ್ಪ ಬಸವರಾಜು ಮಾತನಾಡಿ ಕೆಎಸ್ ಐಸಿ ಜಾಗದಲ್ಲಿ‌ ಕ್ರೀಡಾಂಗಣ ನಿರ್ಮಾಣ ಬೇಡ, ಬೇರೊಂದು ಜಾಗ ಗುರುತಿಸಿ ಅಲ್ಲಿ ಕ್ರೀಡಾಂಗಣ ನಿರ್ಮಣವಾಗಲಿ, ಸಿಲ್ಕ್ ಫ್ಯಾಕ್ಟರಿ ಆವರಣವನ್ನು ಹಸರೀಕರಣ ಗೊಳಿಸಿ,ಫ್ಯಾಕ್ಟರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕೆಲಸಗಳಾಗಬೇಕು. ಮತ್ತಷ್ಟು ಕಾರ್ಮಿಕರನ್ನು ನೇಮಕ ಮಾಡಿಕೊಂಡು, ಉತ್ಪಾದನೆ ಹೆಚ್ಚಿಸಬೇಕು, ಈ ಸ್ಥಳದಲ್ಲಿ ಸುಸಜ್ಜಿತವಾದ ಉದ್ಯಾನವನ‌ ನಿರ್ಮಿಸುವ ಮೂಲಕ ನಾಗರೀಕರಿಗೆ ಬಳುವಳಿ ನೀಡುವಂತೆ ಆಗ್ರಹಿಸಿದರು.

ಸತ್ಯಾಗ್ರಹನಿರತ ಬಸವರಾಜುರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ, ಅರ್ಜುನ್ ರಮೇಶ್ ಕಳೆದ ನಾಲ್ಕೈದು ದಿನಗಳಿಂದ ಕಾರ್ಮಿಕರು ಲೆಲಸ ಮಾಡದೇ ಧರಣಿ ಕುಳಿತಿದ್ದಾರೆ, ಹೋರಾಟಗಳು ಬರೀ ಬಾಯಿ ಮಾತಿಗೆ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ತೋಟದಪ್ಪ ಬಸವರಾಜು ದೃಡ ಸಂಕಲ್ಪದೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಕ್ರೀಡಾಂಗಣ ಇಲಾಖೆಯವರು ಈಗಾಗಲೇ ಕಾಂಗ್ರೆಸ್ ಪಕ್ಷದ ಮುಖಂಡರೊಡಗೂಡಿ ಕಾರ್ಖಾನೆ ಕಾಂಪೌಂಡ್ ಪೋಟೋ ತೆಗೆದು ಗೋಡೆ ಕೆಡವಲು‌ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕ್ರಿಯೆಯಲ್ಲಿ ದ್ವೇಷದ ರಾಜಕಾರಣ ಎದ್ದು ಕಾಣುತ್ತಿದೆ. ಜಿದ್ದಿಗೆ ಬಿದ್ದಿರುವ ಕೆಲವು ಕಾಂಗ್ರೆಸ್ ನಾಯಕರು ಫ್ಯಾಕ್ಟರಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಕ್ರೀಡಾಂಗಣ ನಿರ್ಮಾಣವಾಗಬೇಕೆಂಬ ಕೂಗಿಗೆ ನಮ್ಮ ಬೆಂಬಲ ಇದೆ. ಆದರೆ ಈ ಜಾಗ ಬಿಟ್ಟು ಬೇರೆಡೆ ನಿರ್ಮಿಸಿದರೆ ನಮ್ಮ‌ಬೆಂಬಲ ಸಹ ಇರುತ್ತದೆ. ರಾಜಕೀಯ ದುರುಪಯೋಗಕ್ಕಾಗಿ ಕ್ರೀಡಾಂಗಣ ಮಾಡಲು ಹೊರಟಿರುವುದು ತಪ್ಪು,ಅದರ ಬದಲಿಗೆ ಫ್ಯಾಕ್ಟರಿಗೆ ಆಧುನಿಕ ಯಂತ್ರಗಳು ಹಾಗು ಯೂನಿಟ್ ಅನ್ನು ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.

ಈ ವೇಳೆ ಪರಿಸರ ಬಳಗದ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಬಳಗ ಮತ್ತು ಗ್ರಾಹಕ ಪರಿಷತ್ತಿನ ಕಾರ್ಯದರ್ಶಿ ಪ್ರಭಾ ನಂದೀಶ್, ಶೋಭಾ ಶಿವಕುಮಾರ್, ಸುಶೀಲ, ಸುಗುಣ, ಗಾಯತ್ರಿ, ಗಂಠಯ್ಯ, ಅಕ್ಬರ್, ಶೈಲಜೇಶ್, ಗುರುಸ್ವಾಮಿ, ಭಾನು ಪ್ರಶಾಂತ್, ಮಂಜುಳಾ, ಡಾ.ಮಲ್ಲಿಕಾರ್ಜುನ ಸ್ವಾಮಿ, ತಾ.ಪಂ.ಮಾಜಿ‌ ಸದಸ್ಯ ಬಸವರಾಜು, ಹಿರಿಯ ಶ್ಯಸ್ತ ತಜ್ಞ ಡಾ. ಎಂ ರೇವಣ್ಣ, ಪುರಸಭಾ ಸದಸ್ಯ ಎಸ್ ಕೆ ಕಿರಣ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಲಗೂಡು ಮಂಜು, ವೆಂಕಟರಮಣ ಶೆಟ್ಟಿ, ಬೆನಕನಹಳ್ಳಿ ವಿಜಯಕುಮಾರ್, ಟಿ ಎನ್ ಗುರುಪ್ರಸಾದ್, ರಾಜಶೇಖರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಿರಗಸೂರು ಶಂಕರ್, ಸಿ.ಡಿ. ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.

Tags:
error: Content is protected !!