Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಸಂತಮಹಲ್ ಆವರಣದಲ್ಲಿ ಬೀಸದ ತಂಗಾಳಿ

ನಿರ್ವಹಣೆ ಇಲ್ಲದೆ ನಲುಗಿದೆ ೧೮೦ ವರ್ಷದ ಕಟ್ಟಡ; ಡಾ.ರಾಜಕುಮಾರ್ ಅಭಿನಯದ ಹಲವು ಚಿತ್ರಗಳು ಇಲ್ಲೇ ಚಿತ್ರೀಕರಣ

ಕೆ ಬಿ ರಮೇಶ ನಾಯಕ

ಮೈಸೂರು: ಭವಿಷ್ಯದ ಶಿಕ್ಷಕರನ್ನು ರೂಪಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಾರ್ಯ ನಿರ್ವಹಿಸುತ್ತಿರುವ ವಸಂತ ಮಹಲ್ ಕಟ್ಟಡ ತನ್ನ ಉಳಿವಿಗಾಗಿ ಎದುರು ನೋಡುತ್ತಿದೆ.

ನಗರದ ಹೃದಯ ಭಾಗದಲ್ಲಿ ತಂಪಾದ ವಾತಾವರಣ, ಹಕ್ಕಿ-ಪಕ್ಷಿಗಳ ನಾದ, ತಂಗಾಳಿಯ ಮಡಿಲಲ್ಲಿ ಇರುವ ಈ ಸುಂದರ ವಸಂತ ಮಹಲ್ ಕಟ್ಟಡವು ದಶಕಗಳ ಹಿಂದೆ ಜನರ ಗಮನ ಸೆಳೆಯುವ ಜೊತೆಗೆ ಚಿತ್ರೀಕರಣಕ್ಕೆ ಪ್ರಖ್ಯಾತ ಸ್ಥಳವೆಂದು ಕರೆಸಿಕೊಂಡಿದ್ದರೂ ಈಗ ನಿರ್ವಹಣೆಯ ಭಾಗ್ಯ ಇಲ್ಲದೆ ಕುಸಿಯುವ ಹಂತಕ್ಕೆ ತಲುಪಿದೆ.

ಡಾ.ರಾಜ್‌ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಶೂಟಿಂಗ್ ತಾಣವಾಗಿದ್ದ ವಸಂತ್ ಮಹಲ್ ಸಾವಿರಾರು ಶಿಕ್ಷಕರನ್ನು ತಯಾರು ಮಾಡುವಂತಹ ಕೇಂದ್ರವಾಗಿ ಮಾರ್ಪಟಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಲುಗಿ ಹೋಗಿದೆ. ೧೮೪೨ರಲ್ಲಿ ಮೈಸೂರು ಅರಸರಿಂದ ನಿರ್ಮಿಸಲ್ಪಟ್ಟಿರುವ ‘ವಸಂತ ಮಹಲ್ ತನ್ನ ಉಳಿವಿಗಾಗಿ ನಿತ್ಯ ಹೋರಾಟ ನಡೆಸುತ್ತಿದೆ. ಮಳೆಗಾಲದಲ್ಲಂತೂ ಈ ಕಟ್ಟಡದ ಯಾತನೆ ದುಪ್ಪಟ್ಟಾಗುತ್ತದೆ. ಟಸ್ಕನ್ ಶೈಲಿಯ ವಾಸ್ತುಶಿಲ್ಪ ಹೊಂದಿರುವ ವಿಶೇಷವಾದ ಈ ಅರಮನೆಯನ್ನು ಸಂರಕ್ಷಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೂ ಉಳಿಸುವುದು ಅಧಿಕಾರಿಗಳಿಗೆ ಬೇಕಿಲ್ಲ ಎನ್ನುವಂತಾಗಿದೆ.

ವಸಂತ ಮಹಲ್‌ನ ದುಸ್ಥಿತಿ ಅರಿಯಲು ತಜ್ಞರೇ ಬೇಕಿಲ್ಲ. ಕಟ್ಟಡದ ಸುತ್ತ ಒಂದು ಸುತ್ತು ಬಂದರೆ ಸಾಕು, ಈ ಪಾರಂಪರಿಕ ಕಟ್ಟಡದ ಸಂಕಷ್ಟದ ಸರಮಾಲೆ ಕಣ್ಣಿಗೆ ಕಟ್ಟುತ್ತದೆ. ಕಟ್ಟಡದ ಪ್ರತಿ ಮೂಲೆಯೂ ದುಸ್ಥಿತಿಗೆ ತಲುಪಿದೆ. ಮಳೆಗಾಲದಲ್ಲಿ ನೀರು ಸೋರದ ಭಾಗವೇ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.

ಮುರಿದುಬಿದ್ದಿರುವ ಮೆಟ್ಟಿಲುಗಳು:  ಕಟ್ಟಡದ ಹಿಂಭಾಗ ಸಂಪೂರ್ಣ ಶಿಥಿಲಗೊಂಡಿದೆ. ಜತೆಗೆ ಕೆಲ ಕೊಠಡಿಗಳ ಮೂಲೆಗಳಲ್ಲಿ ನೀರು ಸೋರಿಕೆಗಾಗಿ ಮಡ್ಡಿ ಹಾಗೂ ಬಣ್ಣ ಹಾಳಾಗಿದೆ. ಇನ್ನೂ ಮೊದಲ ಅಂತಸ್ತಿನ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ವಿಶೇಷ ವಾಸ್ತುಶಿಲ್ಪ ಹೊಂದಿರುವ ಕಟ್ಟಡದ ಮೆಟ್ಟಿಲುಗಳು ಮುರಿದು ಬಿದ್ದಿವೆ. ಜತೆಗೆ ನೆಲ ಅಂತಸ್ತಿನ ಮೂರು ಕೊಠಡಿಗಳ ಗೋಡೆ ಬಿರುಕು ಬಿಟ್ಟು, ಚಾವಣಿ ಕುಸಿಯುವ ಆತಂಕ ಇರುವುದರಿಂದ ಬಳಕೆಯನ್ನು ನಿಲ್ಲಿಸಲಾಗಿದೆ.

ಅನುದಾನ ಬಿಡುಗಡೆ ಕೋರಿ ಮನವಿ ಪತ್ರ: ತೀವ್ರ ದುಸ್ಥಿತಿಯಲ್ಲಿರುವ ಕಟ್ಟಡದ ದುರಸ್ತಿಗಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಅಂದಾಜು ಪಟ್ಟಿ ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅದರಂತೆ ಸರ್ವೆ ಕಾರ್ಯ  ನಡೆಸಿರುವ ಅಧಿಕಾರಿಗಳು ೩.೮ ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿದ್ದಾರೆ. ರಾಜ್ಯ ಸರ್ಕಾರದಿಂದ  ಅನುದಾನ ಬಿಡುಗಡೆಯಾಗಬೇಕಿದೆ.

ಪಾರಂಪರಿಕ ಕಟ್ಟಡ ಆಗಿರುವುದರಿಂದ ಒಟ್ಟು ನಿರ್ವಹಣೆ, ದುರಸ್ತಿ ಕಾರ್ಯಗಳನ್ನು  ಮಾಡಲು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ದುರಸ್ತಿ ಕಾರ್ಯ ನಡೆದಿಲ್ಲ. ದುರಸ್ತಿಗೆ ಸಂಬಂಧಪಟ್ಟಂತೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಇದೀಗ ಪಿಡಬ್ಲ್ಯೂಡಿ ಇಲಾಖೆ ದುರಸ್ತಿಗಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿದೆ. ಇದಕ್ಕೆ ೩.೮ ಕೋಟಿ ರೂ. ಅನುದಾನ ಬಿಡುಗಡೆ ಆಗಬೇಕಿರುವುದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಲಾಗಿದೆ.

 

– ಸಿ.ಆರ್.ನಾಗರಾಜಯ್ಯ, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ