ಮೈಸೂರು: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕಾರಣಿಗಳು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದು, ಸದ್ಯ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಹ ಈ ಕುರಿತು ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸುಮಲತಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾಗ ನೇಹಾ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ ʼನಾನೂ ಸಹ ಈ ವಿಚಾರವನ್ನು ಗಮನಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೊಗಳು ಹರಿದಾಡುತ್ತಿವೆ. ಈಗಾಗಲೇ ಆಕೆಯ ಹತ್ಯೆಯಾಗಿದೆ, ಆ ಜೀವ ನೊಂದಿದೆ. ಇಂತಹ ಸಂದರ್ಭದಲ್ಲಿ ಆಕೆಯ ಕ್ಯಾರೆಕ್ಟರ್ ಬಗ್ಗೆ ಮಾತನಾಡುವುದು ಬಹಳ ನೋವಿನ ವಿಚಾರʼ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು ʼಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಎನ್ನುವುದು ಸರಿಯಲ್ಲ. ಆದರೆ ಒಂದು ಸಮುದಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ತಪ್ಪು. ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದ ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಸಮರ್ಥನೆ ಮಾಡಿಕೊಂಡ್ರಿ. ಈಗ ಇದು ವೈಯಕ್ತಿಕ ಕಾರಣಕ್ಕೆ ಆಗಿರುವ ಕೊಲೆ ಎನ್ನುವುದು ತಪ್ಪು. ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದರು.
ಈ ಮೂಲಕ ಈ ಹಿಂದೆ ಸಿಎಂ ಸಿದ್ದರಾಮಯ್ಯ ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆಯಾಗಿದೆ ಎಂದು ನೀಡಿದ್ದ ಹೇಳಿಕೆಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ.





