ಮೈಸೂರು: ಎಕ್ಸಿಟ್ ಪೋಲ್ಸ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪರವಾಗಿ ಮುನ್ನಡೆ ಸಿಕ್ಕಿರುವುದು ಸಂತಸದ ವಿಷಯ. ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಜನರ ನಿರೀಕ್ಷೆಯಂತೆ ಕೆಲಸ ಮಾಡಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು (ಜೂನ್.2) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ದೇಶದ ಜನತೆ ಎನ್‌ಡಿಎಗೆ ಆಶೀರ್ವಾದ ಮಾಡಲಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಮುನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ, ನಮ್ಮೆಲ್ಲರ ನಿರೀಕ್ಷೆ ಮೀರಿದಂತೆ ಫಲಿತಾಂಶ ಬರಲಿದೆ. ನಾವು ಕೂಡಾ ಇದನ್ನೇ ನಿರೀಕ್ಷೆ ಮಾಡಿದ್ದೆವು. ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಗೆದ್ದ ಬಳಿಕ ಕೇಂದ್ರ ಸ್ಥಾನಮಾನದ ಬಗ್ಗೆ ಚಿಂತಿಸುವುದಿಲ್ಲ ಬದಲಾಗಿ ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಯದುವೀರ್ ತಿಳಿಸಿದರು.