ನಂಜನಗೂಡು: ಜಮೀನಿನಲ್ಲಿದ್ದ ರೈತನ ಮೇಲೆ ಚಿರತೆಯೊಂದು ದಾಳಿ ಮಾಡಿ, ನಂತರ ಮೇಕೆಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ದಾಳಿಯಿಂದ ಗ್ರಾಮದ ಮಹದೇವಯ್ಯ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಇದೇ ವೇಳೆ ಪಕ್ಕದಲ್ಲೇ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.
ಮಹದೇವಯ್ಯ ತಮ್ಮ ಜಮೀನಿನಲ್ಲಿ ಮೇಕೆ ಮೇಯಿಸುತ್ತಿರುವ ವೇಳೆ ಏಕಾಏಕಿ ಚಿರತೆ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಳಗೆ ಬಿದ್ದು ಚಿರತೆಯಿಂದ ತಪ್ಪಿಸಿಕೊಂಡ ಅವರಿಗೆ ಕೈಯಲ್ಲಿ ಸಣ್ಣ ಗಾಯವಾಗಿದೆ. ಬಳಿಕ ಚಿರತೆ ಪಕ್ಕದಲ್ಲೆ ಇದ್ದ ಮೇಕೆ ಮೇಲೆ ದಾಳಿ ನಡೆಸಿ ಮೇಕೆಯನ್ನು ಕೊಂದು ಹಾಕಿ ಎಳೆದೊಯ್ಯುವ ಸಮಯ ಜನರು ಕೂಗಿದ ಬಳಿಕ ಮೇಕೆ ದೇಹವನ್ನು ಅಲ್ಲೆ ಬಿಟ್ಟು ಹೋಗಿದೆ. ಬಳಿಕ ಸಂಜೆ ವೇಳೆಗೆ ನಾಯಿ ಮೇಲೆಯೂ ದಾಳಿ ನಡೆಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಇಷ್ಟರಲ್ಲೇ ಬೋನು ಇರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವುದಾಗಿ ಜೊತೆಗೆ ರೈತನಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಗ್ರಾಮದಲ್ಲಿ ಈವರೆಗೂ 20ಮೇಕೆಗಳು ಚಿರತೆ ದಾಳಿಗೆ ಒಳಗಾಗಿದ್ದು, ಅರಣ್ಯ ಅಧಿಕಾರಿಗಳು ಕೂಡಲೇ ಹೆಚ್ಚು ಬೋನ್ ತರಿಸಿ ಹಾವಳಿ ಹೆಚ್ಚಿರುವ ಕಡೆಗಳಲ್ಲಿ ಇರಿಸಬೇಕು. ದಾಳಿ ನಡೆಸಿರುವ ಹಿನ್ನೆಲೆ ಜನರಲ್ಲಿ ಭೀತಿ ಹೆಚ್ಚಾಗಿದೆ. ಇಲಾಖೆ ತ್ವರಿತ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.





