ಮಲ್ಕುಂಡಿ: ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಇದರಿಂದ ಜನಸಾಮಾನ್ಯರು ಹೊರ ಓಡಾಡಲು ಭಯಪಡುವಂತಾಗಿದೆ. ಇದೀಗ, ಹಾಡಾಗಲೇ ಹುಲಿ ದಾಳಿಯಿಂದ ಹಸು ಬಲಿಯಾಗಿರುವ ಘಟನೆ ಬಳ್ಳೂರ ಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜೇಶ್ ಎಂಬವರು ಸೋಮವಾರ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಪಕ್ಕದ ಪೊದೆಯಲ್ಲಿದ್ದ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಪಕ್ಕದಲ್ಲೇ ಕೆಲಸ ಮಾಡುತ್ತಿದ ರೈತರು ಕಿರುಚಾಡಿಕೊಂಡಿದ್ದಾರೆ, ಗಾಬರಿಗೊಂಡ ಹುಲಿ ಹಸುವನ್ನು ಕೊಂದು ಪರಾರಿಯಾಗಿದೆ. ಗಾಬರಿಕೊಂಡ ರೈತರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗ್ರಾಪಂ ಉಪಾಧ್ಯಕ್ಷ ಬಿ.ಟಿ.ಕುಮಾರ್ ಮಾತನಾಡಿ, ಕಾಡಾಂಚಿನ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳಿ ಕೆಲಸ ಮಾಡಲು ಭಯಬೀತರಾಗಿದ್ದಾರೆ. ಗ್ರಾಮದ ರಾಜೇಶ್ ಎಂಬವರ ಹಸುವನ್ನು ಹುಲಿ ಕೊಂದಿದ್ದು, ಇದರಿಂದ ಅವರು ಜೀವನ ನಡೆಸಲು ಕಷ್ಟವಾಗಿದೆ. ಅರಣ್ಯ ಇಲಾಖೆ ಅಽಕಾರಿಗಳು ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕು, ಹಸುವಿನ ಮಾಲೀಕನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.