ನಂಜನಗೂಡು: ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.
ಕಳೆದ 3-4 ದಿನಗಳಿಂದ ನೀರಿಗಾಗಿ ಪರದಾಡಿದ ದೇವರಸನಹಳ್ಳಿಯ ಜನತೆ ಕೊನೆಗೆ ಶನಿವಾರ ನೇರವಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಗೂ ನೀರಿಲ್ಲ, ಊರಿಗೂ ನೀರಿಲ್ಲ. ನೀರು ಕೊಡುವುದಾದರೆ ಪಂಚಾಯಿತಿಯಲ್ಲಿ ಇರಿ, ನೀರು ಕೊಡಲು ಆಗದಿದ್ದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಬ್ಬರೂ ಮನೆಗೆ ಹೋಗಿ ಎಂದು ಗ್ರಾಮಸ್ಥರು ಗುಡುಗಿದಾಗ ಮಣಿದ ಪಂಚಾಯಿತಿ ಅಧಿಕಾರಿಗಳು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಸಂಜೆ ಒಳಗೆ ನೀರು ಬರುತ್ತದೆ ಎಂದು ಅವರನ್ನು ಸಮಾಧಾನಪಡಿಸಿ ಕಚೇರಿಯ ಬೀಗ ತೆಗೆದು ನಿಟ್ಟುಸಿರುಬಿಟ್ಟರು.





