ನಂಜನಗೂಡು: ಹಂದಿಗಳ ಬೇಟೆಗೆ ಹಾಕಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನಿನಲ್ಲಿ ಮೇವು ಮೇಯುತ್ತಿರುವಾಗ ಘಟನೆ ಸಂಭವಿಸಿದೆ. ಕಾಡು ಹಂದಿಗಳನ್ನು ಬೇಟೆಯಾಡಲು ಕಿಡಿಗೇಡಿಗಳು ಸಿಡಿಮದ್ದನ್ನು ಅಳವಡಿಸಿದ್ದಾರೆ ಎಂಬುದನ್ನು ತಿಳಿಯದೇ ರೈತ ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್‌ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ವೇಳೆ ಸಿಡಿಮದ್ದು ಹಠಾತ್ತನೇ ಸಿಡಿದ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ರೈತ ಚನ್ನನಂಜೇಗೌಡ ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಗಂಭೀರ ಗಾಯಗೊಂಡಿರುವ ಹಸುವಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಮದ್ದನ್ನು ಅಳವಡಿಸಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.