Mysore
23
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕರ್ನಾಟಕದಲ್ಲಿರುವ ಬೇರೇ ಬ್ರಾಂಡ್‌ ನ ಹಾಲಿನ ಉತ್ಪನ್ನಗಳು ನಂದಿನಿಯ ಸೊಸೆಯಂದಿರು, ಅಳಿಯಂದಿರಾ : ಪ್ರತಾಪ್ ಸಿಂಹ ವ್ಯಂಗ್ಯ

ಮೈಸೂರು : ಹಾಲು ಕೊಡುವಂತಹ ಗೋವಿನ ಹತ್ಯೆ ನಿಷೇಧಕ್ಕಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು ಭಾರತೀಯ ಜನತಾ ಪಕ್ಷ. ನಮಗೆ ಕಾಂಗ್ರೆಸ್ ನವರಿಂದ, ಜೆಡಿಎಸ್ ನವರಿಂದ ನಂದಿನಿ ಮತ್ತು ಕೆಎಂಎಫ್ ನ್ನು ಕಾಪಾಡುವಂತಹ ಪಾಠ ಬೇಕಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಅಮೂಲ್ ನೊಂದಿಗೆ ನಂದಿನಿಯನ್ನು ವಿಲೀನಗೊಳಿಸಲಾಗುತ್ತಿದೆ ಎಂಬ ಚರ್ಚೆ ದೊಡ್ಡಮಟ್ಟದಲ್ಲಿ ಆಗುತ್ತಿದೆ, ಸಂಗತಿ ನಿಜವೇ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾವು ಘಂಟಾಘೋಷವಾಗಿ ಹೇಳಿದ್ದೇವೆ. ಅಮೂಲ್ ಮತ್ತು ಕೆಎಂಎಫ್ ವಿಲೀನ ಮಾಡುತ್ತಿಲ್ಲ. ಈ ತರ ಸುಳ್ಳು ಅಪಪ್ರಚಾರವನ್ನು ಮಾಡಬೇಡಿ ಎಂದು. ಕೆಎಂಎಫ್ ನವರು ಕೂಡ ಪದೇ ಪದೇ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿ ಜನಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಇಷ್ಟು ದಿನದವರೆಗೂ ಕೂಡ ಹಿಂದಿ ಹೇರಿಕೆ ಅಂದರು, ಈಗ ಅಮೂಲ್ ಹೇರಿಕೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಕೇಳಲು ಬಯಸುತ್ತೇನೆ ಸ್ವಾಮಿ ಸಿದ್ದರಾಮಯ್ಯನವರೆ, ಕುಮಾರಸ್ವಾಮಿಯವರೇ, ಜೆಡಿಎಸ್ ನವರೇ ಕಾಂಗ್ರೆಸ್ ನವರೇ ಈ ಹೆರಿಟೇಜ್, ದೊಡ್ಲಾ, ಮಿಲ್ಕಿ ಮಿಸ್ಟ್, ಆರೋಕ್ಯ ಇವೆಲ್ಲ ನಂದಿನಿಯ ಅಕ್ಕ-ತಂಗಿಯರು, ಅಣ್ಣ ತಮ್ಮಂದಿರಾ?, ಅಥವಾ ತಮಿಳುನಾಡಿನಿಂದ, ಆಂಧ್ರದಿಂದ, ತೆಲಂಗಾಣದಿಂದ ಕರ್ನಾಟಕಕ್ಕೆ ಮದುವೆಯಾಗಿ ಬಂದಿರುವ ನಂದಿನಿಯ ಸೊಸೆಯಂದಿರು, ಅಳಿಯಂದಿರಾ ಎಂದು ಪ್ರಶ್ನಿಸಿದರು. ಇಷ್ಟು ವರ್ಷದಿಂದ ದೊಡ್ಲಾ, ಹೆರಿಟೇಜ್ ಇವೆಲ್ಲ ಕರ್ನಾಟಕದಲ್ಲಿ ಇಲ್ವಾ? ಅಥವಾ ಅಮೂಲ್ ಈಗಾಗಲೇ ಬಂದಿಲ್ವಾ? ಬಿಜೆಪಿ ಬಂದ ಮೇಲೆ ಅಮೂಲ್ ಬಂದಿರುವಂಥದ್ದಾ? ಇಷ್ಟಾಗಿಯೂ ಯಾಕೆ ಈ ರೀತಿ ಅಪಪ್ರಚಾರವನ್ನು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.‌

ಹಾಲು ಉತ್ಪಾದನೆ ಬಗ್ಗೆ, ನಂದಿನಿ ಬಗ್ಗೆ, ಕರ್ನಾಟಕ ಮಿಲ್ಕ ಫೆಡರೇಷನ್ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿರುವಂಥದ್ದು ಭಾರತೀಯ ಜನತಾ ಪಕ್ಷ. ಮಾಜಿ ಸಿಎಂ ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನವನ್ನು ಕೊಟ್ಟಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರೋತ್ಸಾಹಧನವನ್ನು ಐದು ರೂಪಾಯಿಗೆ ಏರಿಸಿದ್ದರು. ಹಾಲು ಕೊಡುವಂತಹ ಗೋವಿನ ಹತ್ಯೆ ನಿಷೇಧಕ್ಕಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದವರು ನಾವು. ನಮಗೆ ಕಾಂಗ್ರೆಸ್ ನವರಿಂದ, ಜೆಡಿಎಸ್ ನವರಿಂದ ನಂದಿನಿ ಮತ್ತು ಕೆಎಂಎಫ್ ನ್ನು ಕಾಪಾಡುವಂತಹ ಪಾಠ ಬೇಕಾಗಿಲ್ಲ. ಹಾಲು ಕೊಡುವಂತಹ ಹಸುವಿನ ರಕ್ಷಣೆಗೆ ಕಟಿಬದ್ಧವಾಗಿದ್ದು ಬಿಜೆಪಿ ಸರ್ಕಾರ ಎಂದು ಸ್ಪಷ್ಟಪಡಿಸಿದರು.

ಇಷ್ಟೆಲ್ಲ ಮಾತಾಡ್ತಿದ್ದೀರಲ್ಲ ಅಮೂಲ್ ಬಗ್ಗೆ, ಸಿದ್ದರಾಮಯ್ಯನವರೇ ಯಾವ ಹಸು ಹಾಲು ಕೊಡುತ್ತಲ್ಲ ಆ ಹಾಲು ಕೊಡುವ ಹಸುವನ್ನೇ ಕಡಿದು ತಿನ್ನೋಕೆ ಅಂತ ತೀರ್ಥಹಳ್ಳಿ ಹತ್ತಿರ ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದನಲ್ಲ ದನಗಳ್ಳ ಅವನ ಮೇಲೆ ಪೊಲೀಸರು ಗೋಲಿಬಾರ್ ಮಾಡಿ ಸಾಯಿಸಿದಾಗ ದನಗಳ್ಳನಿಗೆ ನೀವು ಪರಿಹಾರ ಕೊಟ್ಟು ಪೊಲೀಸ್ ಕಾನ್ಸಟೇಬಲ್ ಗೆ ಸಸ್ಪೆನ್ಶನ್ ಬಳುವಳಿ ಕೊಟ್ಟವರು. ನಿಮಗೆ ಮತ್ತೇನಾದರೂ ಅಧಿಕಾರ ಕೊಟ್ಟು ಬಿಟ್ಟರೆ ಗೋಹತ್ಯೆಯನ್ನು ಮಾಡಿ ಗೋವನ್ನು ತಿನ್ನುವವರ ಸಂಖ್ಯೆ ಜಾಸ್ತಿಯಾಗಿ ಕೆಎಂಎಫ್ ಶಾಶ್ವತವಾಗಿ ಮುಚ್ಚಿಹೋಗತ್ತೆ. ಇದು ಕರ್ನಾಟಕದ ಜನತೆಗೆ ಗೊತ್ತಿದೆ. ದಯವಿಟ್ಟು ಈ ರೀತಿ ವ್ಯರ್ಥ ಆಲಾಪನೆಯನ್ನು ಮಾಡಬೇಡಿ. ನೀವು ಗೋಹತ್ಯೆ ಮಾಡುವವರ ಪರವಿದ್ದೀರಿ ಎಂದು ಕರ್ನಾಟಕದ ಜನತೆಗೂ ಗೊತ್ತಿದೆ. ನಿಮ್ಮ ಯಾವುದೇ ಆರೋಪಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!