ಮೈಸೂರು: ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯ ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ವಿವಿಯ ಕ್ರಾಫರ್ಡ್ ಹಾಲ್ ಮುಂಭಾಗ ಜಮಾವಣೆಗೊಂಡ ಸಂಶೋಧಕರು ವಿಶ್ವವಿದ್ಯಾನಿಲಯದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಬಳಿಕ ಮಾತನಾಡಿದ ಸಂಶೋಧಕ ಸಂಘದ ಅಧ್ಯಕ್ಷ ಶಿವಶಂಕರ್, ವಿಶ್ವವಿದ್ಯಾನಿಲಯವು ಕಳೆದ 6-7 ವರ್ಷಗಳಿಂದ ಎಸ್‌ಸಿ/ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಕುಲಪತಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಈವರೆಗೂ ಕುಲಪತಿಗಳು ಶಿಷ್ಯ ವೇತನ ಹೆಚ್ಚಳಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆಬಾಡಿಗೆ ವೆಚ್ಚ, ಸಂಶೋಧನಾ ಲೇಖನಗಳ ವೆಚ್ಚದ ಹೆಚ್ಚಳ, ವಾರ್ಷಿಕ ಹಾಗೂ ಇತರ ಶುಲ್ಕಗಳ ಹೆಚ್ಚಳ, ಸಂಶೋಧನಾ ಬಳಕೆ ಪರಿಕರಗಳ ಹೆಚ್ಚಳ ಇತ್ಯಾದಿ ಈ ಎಲ್ಲ ಬೆಲೆ ಹೆಚ್ಚಳದಿಂದಾಗಿ ಸಂಶೋಧನಾ ಕಾರ್ಯ ನಡೆಸಲು ಸಾಧ್ಯವಾಗದ ಕಾರಣ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಸಂಶೋಧಕರಿಗೆ ಇದರಿಂದ ಹೊರೆಯಾಗುತ್ತಿದೆ. ಈ ಕಾರಣ ಪ್ರಸ್ತುತ ನೀಡುತ್ತಿರುವ ಶಿಷ್ಯವೇತನ ಜೊತೆಯಲ್ಲಿ 10,000 ಸಾವಿರ ಶಿಷ್ಯವೇತನ ಹೆಚ್ಚಳ ಮಾಡುವವರೆಗೂ ಪ್ರತಿಭಟನೆ ಮುಂದುರೆಯುತ್ತದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಮಹೇಶ್ ಸಿ, ಪ್ರಧಾನ ಕಾರ್ಯದರ್ಶಿ ಕುಶಾಲ್ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.