ಮೈಸೂರು : ಮೈಸೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡೆಸಬೇಕೆಂಬ ದಶಕದ ಕೂಗಿಗೆ ಮರುಜೀವ ಬಂದಿದ್ದು,ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ದೆಹಲಿಯಲ್ಲಿ ನಡೆದ ಸಂಸದರ ಸಭೆಯಲ್ಲಿಯೂ ಕೂಡ ಮೈಸೂರಿಗೆ ಐಐಟಿ ಬರಬೇಕೆಂದು ಚರ್ಚೆ ನಡೆಯಿತು.
ಸಾಂಸ್ಕೃತಿಕ ನಗರಿ ಮೈಸೂರು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ದೇಶ ವಿದೇಶಗಳಿಂದ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಲ್ಲದೆ ಮೈಸೂರಿನಲ್ಲಿ ಶತಮಾನ ಕಂಡಿರುವ ಮೈಸೂರು ವಿವಿ, ರಾಜ್ಯದ ಏಕೈಕ ಕರ್ನಾಟಕ ಮುಕ್ತ ವಿವಿ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಹಾಗೂ ಖಾಸಗಿಯಾಗಿ ಜೆಎಸ್ ಎಸ್ ವಿವಿ ಸೇರಿ ಒಟ್ಟು ೪ ವಿಶ್ವವಿದ್ಯಾನಿಲಯಗಳು ಇದೆ. ಅಷ್ಟೇ ಅಲ್ಲದೆ ಮೈಸೂರು ಮೆಡಿಕಲ್ ಕಾಲೇಜು, ಫಾರ್ಮಸಿ ಕಾಲೇಜು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗಳೂ ಸಹ ಇದೆ. ಆದರೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಇಲ್ಲ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಪ್ರತಿಭಾವಂತ ಮಕ್ಕಳು ತಾಂತ್ರಿಕ ಶಿಕ್ಷಣ ಪಡೆಯಲು ಮೈಸೂರಿಗೂ ಐಐಟಿ ಸಿಗಬೇಕೆಬುದು ಸಂಶೋಧಕರು ಹಾಗೂ ತಜ್ಞರ ಅಭಿಪ್ರಾಯವಾಗಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಂಸದರ ಸಭೆಯಲ್ಲಿ ಮೈಸೂರಿನಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ರಾಜ್ಯ ಸರ್ಕಾರ ಈ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಕೇಂದ್ರ ಅನುಮೋದನೆ ನೀಡಿದ್ದಲ್ಲೇ ಆದಲ್ಲಿ ಮೈಸೂರಿಗರ ಬಹು ವರ್ಷಗಳ ಬೇಡಿಕೆಯ ಕನಸು ನನಸಾಗುತ್ತದೆ.