ಬೆಂಗಳೂರು: ಕಳೆದ ಬಾರಿ ವಿಶ್ವಾವಿಖ್ಯಾತ ನಾಡಹಬ್ಬ ದಸರಾ ಮೇಲೆ ಬರದ ಕರಿ ನೆರಳು ಆವರಿಸಿದ್ದ ಕಾರಣ ರಾಜ್ಯ ಸರ್ಕಾರ ಸರಳ ದಸರಾ ಆಚರಣೆ ಮಾಡಿತ್ತು. ಆದರೆ, ಇದೀಗ ಆಗಿಲ್ಲ, ಈ ಬಾರಿ ಅದ್ದೂರಿ ದಸರಾ ಆಚರಣೆಗೆ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದ್ದು, ಜಂಬೂ ಸವಾರಿಯ ಮುಹೂರ್ತ ಕೂಡ ಫಿಕ್ಸ್ ಮಾಡಿದೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರ ಸೋಮವಾರ(ಆ.12) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ದಿಯ ಹಿನ್ನೆಲೆಯಲ್ಲಿ ಅದ್ದೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದರು.
ಅಕ್ಟೋಬರ್ 3 ರಿಂದ 12 ರವರೆಗೆ ದಸರಾ ನಡೆಯಲಿದೆ. ಅಕ್ಟೋಬರ್ 3ರ ಬೆಳಿಗ್ಗೆ 9ಗಂಟೆ 10 ನಿಮಿಷಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮತ್ತು ದಸರಾ ಉದ್ಘಾಟನೆ ಮಾಡಲಾಗುತ್ತದೆ. ಅಕ್ಟೋಬರ್ 12ರ ಮಧ್ಯಾಹ್ನ 12 ಗಂಟೆ 10 ನಿಮಿಷಕ್ಕೆ ಜಂಬೂ ಸವಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಕಳೆದ ವರ್ಷ ದಸರಾಗೆ 30ಕೋಟಿ ಖರ್ಚಾಗಿತ್ತು. ಈ ಸಲ ಇನ್ನಷ್ಟು ಹೆಚ್ಚು ಹಣ ಒದಗಿಸುವ ಇಂಗಿತ ವ್ಯಕ್ತಪಡಿಸಲಾಗಿದೆ ಎಂದರು.
ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ.ಜೆ.ಜಾರ್ಜ್, ಹೆಚ್.ಕೆ. ಪಾಟೀಲ, ಕೆ. ವೆಂಕಟೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಸಚಿವರು, ಶಾಸಕರುಗಳು ಹಾಗೂ ಮುಖ್ಯಮಂತ್ರಿಯರ ಅಪರ ಮುಖ್ಯ ಕಾರ್ಯದರ್ಶಿಎಲ್.ಕೆ.ಅತೀಕ್ ಸೇರಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಿಎಂ ನೀಡಿದ ಇತರೆ ಸೂಚನೆಗಳು..̇
- ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ.
- ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು.
- ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು.
- ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು.
- ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ.
- ವಿಜ್ರಂಭಣೆಯ ನಾಡ ಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತೇವೆ
- ದೀಪಾಲಂಕಾರ ಈ ಬಾರಿ 21 ದಿನ ಇರಲಿ.
- ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ.
- ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಿ.
- ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು.
- ಕರ್ನಾಟಕ ಸಂಭ್ರಮ 50 ನವೆಂಬರ್ ವರೆಗೂ ನಡೆಯಲಿದೆ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಿ.
- ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿ ಸಭೆ ನಿರ್ಧರಿಸಿತು.
- ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ನಡೆಸಲೂ ವಿನಂತಿಸಲಾಗುವುದು.
- ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು.
- ಮಾಮೂಲು ಹಳೆ ಪದ್ಧತಿಗಳಲ್ಲೇ ಮಾಡುವುದಕ್ಕಿಂತ upgrade (ಉನ್ನತೀಕರಿಸಿ) ಮಾಡಿ.





