Mysore
29
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಅಂಬೇಡ್ಕರ್‌ ಭವನ ಪೂರ್ಣಗೊಳಿಸದಿದ್ದರೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ದಸಂಸ ನಿರ್ಧಾರ

ಮೈಸೂರು: ನಗರದ ಹೃದಯ ಭಾಗದಲ್ಲಿ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್‌ ಸಮುದಾಯ ಭವನದ ಕಾಮಗಾರಿಯು ಡಿಸೆಂಬರ್‌ 6ರೊಳಗೆ ಪುನರಾರಂಭವಾಗದಿದ್ದರೆ ಡಿಸೆಂಬರ್‌ 6 ಸರ್ಕಾರಿ ಕಾರ್ಯಕ್ರಮಕ್ಕೆ ತಡೆಯೊಡ್ಡಲು ದಸಂಸ(ದಲಿತ ಸಂಘರ್ಷ ಸಮಿತಿ) ನಿರ್ಧಾರಿಸಿದೆ ಎಂದು ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ದಲಿತ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಭವನ ಶಕ್ತಿಕೇಂದ್ರದಂತೆ ಕಾರ್ಯನಿರ್ವಹಿಸಲಿ ಎಂಬ ವಿಶಾಲ ಆಶಯದಿಂದ ಅಂದಿನ ಮೈಸೂರು ಜಿಲ್ಲಾಧಿಕಾರಿಗಳಾದ ಪಿ.ಮಣಿವಣ್ಣನ್ ಅವರು ಮೈಸೂರು ನಗರದ ಚಾಮುಂಡಿ ಗೆಸ್ಟ್ ಹೌಸ್ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿದ್ದ ಖಾಲಿ ನಿವೇಶನವನ್ನು ದಸಂಸ ಒತ್ತಾಯದಂತೆ ಜುಲೈ 28, 2010 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದರು. ಅಲ್ಲದೆ, ಮೈಸೂರು ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಗಳಲ್ಲಿ ಖರ್ಚಾಗದೆ ಉಳಿದಿದ್ದ ಶೇ.22.75 ದಲಿತರ ಅನುದಾನದಲ್ಲಿ 14.66 ಕೋಟಿ ರೂಪಾಯಿಗಳನ್ನು ಕ್ರೂಡಿಕರಿಸಿ, ಸುಮಾರು 15 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನದ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಅಂದಿನಿಂದ ಈವರೆಗೆ ಕಾಮಗಾರಿ ಕುಂಟುತ್ತಲೇ ಸಾಗಿದ್ದು, ಸಿವಿಲ್‌  ಕೆಲಸವಷ್ಟೇ ನಡೆದು ಅಪೂರ್ಣಗೊಂಡಿದೆ ಎಂದು ಬೇಸರಿಸಿದರು.

ಇದೀಗ, ಕಾಮಗಾರಿ ವಿಳಂಬದ ಕಾರಣದಿಂದ 15 ಕೋಟಿಗೆ ಮುಗಿಯಬೇಕಿದ್ದ ಕಾಮಗಾರಿ ಅಂದಾಜು ವೆಚ್ಚ ಈಗ ಸುಮಾರು 34 ಕೋಟಿಗೆ ಏರಿಕೆಯಾಗಿದೆ. ಈಗ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲವೆಂಬ ನೆಪದಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದರು.

2013 ರಲ್ಲಿ ದಲಿತ ಸಮುದಾಯದ ಅತಿ ಹೆಚ್ಚು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ, ದಲಿತ ಸಮುದಾಯದ ದಿವಂಗತ ವಿ.ಶ್ರೀನಿವಾಸ್ ಪ್ರಸಾದ್, ಹೆಚ್.ಸಿ.ಮಹದೇವಪ್ಪರವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು ಭವನ ಪೂರ್ಣಗೊಳಿಸಲು ಮುಂದಾಗದಿರುವುದು ಪ್ರಶ್ನೆಯಾಗಿಯೇ ಉಳಿದಿದೆ ಎಂದರು ಹೇಳಿದರು.

ಅಂಬೇಡ್ಕರ್ ಭವನದ ನಂತರ ಪ್ರಾರಂಭವಾದ ಜಿಲ್ಲಾಧಿಕಾರಿಗಳ ಕಟ್ಟಡ, ನಗರ ಪೊಲೀಸ್ ಆಯುಕ್ತರ ಕಟ್ಟಡ, ಜಿಲ್ಲಾಸ್ಪತ್ರೆ, ಮಹಾರಾಣಿ ಕಾಲೇಜು ಕಟ್ಟಡ ಇತ್ಯಾದಿಗಳು ಉದ್ಘಾಟನೆಗೊಂಡು ವರ್ಷಗಳೇ ಕಳೆದಿವೆ. ಆದರೆ, ಭವನ ಮಾತ್ರ ಪೂರ್ಣಗೊಂಡಿಲ್ಲ. ಈಗ 2023 ರಲ್ಲಿ ಮತ್ತೆ ದಲಿತ ಸಮುದಾಯದ ಅತಿ ಹೆಚ್ಚು ಮತ ಪಡೆದು ಪುನಃ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಮೈಸೂರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದು, ದಲಿತ ಸಮುದಾಯದ ಡಾ.ಹೆಚ್ .ಸಿ ಮಹದೇವಪ್ಪ ಅವರೇ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಎರಡು ವರ್ಷ ಕಳೆದಿದೆ. ಆದರೂ, ಡಾ.ಅಂಬೇಡ್ಕರ್ ಭವನದ ಕಟ್ಟಡ ಮಾತ್ರ ಇನ್ನೂ ಪೂರ್ಣಗೊಳ್ಳದೆ ನಿರ್ಲಕ್ಷ್ಯಕ್ಕೊಳಗಾಗಿರುವುದೇಕೆ? ಇದಕ್ಕೆ ಯಾರು ಕಾರಣ ಎಂಬ ಅನುಮಾನಗಳು ಮೈಸೂರು ಜಿಲ್ಲೆಯ ದಲಿತರನ್ನು ಕಾಡುತ್ತಿದೆ ಎಂದು ಹೇಳಿದರು.

ಹೀಗಾಗಿ ಡಿಸೆಂಬರ್‌ 6 ರ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಒಳಗೆ ಕಾಮಗಾರಿ ಪ್ರಾರಂಭಿಸಿ 2025ರ ಅಂಬೇಡ್ಕರ್ ಜನ್ಮ ದಿನದಂದು ಭವನ ಉದ್ಘಾಟನೆಗೊಳ್ಳಲು ಸಹಕಾರಿಯಾಗುವಂತೆ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದರು.

ತಪ್ಪಿದ್ದಲ್ಲಿ ಜಿಲ್ಲೆಯಲ್ಲಿ ನಡೆಯುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಯಾವುದೇ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವುದನ್ನು ತಡೆಯಲಾಗುವುದು. ಅಲ್ಲದೆ ಅಂಬೇಡ್ಕರ್ ಕಾರ್ಯಕ್ರಮ ನಡೆಸಲು ಮೈಸೂರು ಜಿಲ್ಲಾಡಳಿತಕ್ಕೂ ನೈತಿಕತೆ ಇಲ್ಲದ ಕಾರಣ ಸರ್ಕಾರ ನಡೆಸುವ ಅಂಬೇಡ್ಕರ್ ಕಾರ್ಯಕ್ರಮಗಳಿಗೂ ಕೂಡ ತಡೆಯೊಡ್ಡಬೇಕಾಗುತ್ತದೆ ಎಂದು  ಎಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯಕೋಟೆ, ಆಲಗೂಡುಶಿವಕುಮಾರ್, ಸಂ.ಸಂಚಾಲಕ ಶಂಭುಲಿಂಗ ಸ್ವಾಮಿ,ತಾ.ಸಂಚಾಲಕ ಕಲ್ಲಹಳ್ಳಿ ಕುಮಾರ್ ಇದ್ದರು.

Tags: