ಮೈಸೂರು: 5 ಸಾವಿರ ಎಕರೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದ ವಿಚಾರ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಚಾ.ನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಳಿ ರಾಜಮನೆತನಕ್ಕೆ ಸೇರಿದ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ರಾಜಮನೆತನಕ್ಕೆ ಸೇರಿದ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಪ್ರಮೇಯವಿಲ್ಲ. ರಾಜಮಾತೆ ಅವರು ಕಳೆದ ಮಾರ್ಚ್ ಕೊನೆಯ ವಾರದಂದು ತಕರಾರು ಪತ್ರ ಬರೆದಿದ್ದಾರೆ. ಅದರಲ್ಲಿ ಅಟ್ಟುಗುಳಿಪುರ ಸೇರಿದಂತೆ 7-8 ಗ್ರಾಮಗಳಲ್ಲಿ ನಮ್ಮ ಜಮೀನುಗಳ ಮೇಲೆ ಹಕ್ಕುಗಳಿವೆ. ಹೀಗಾಗಿ ಕಂದಾಯ ಗ್ರಾಮ ಎಂದು ಕಳುಹಿಸಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ನಮಗೆ ಪತ್ರದೊಂದಿಗೆ ಯಾವುದೇ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಸದ್ಯ ಪತ್ರವನ್ನು ಎಸಿ ಹಾಗೂ ತಹಸೀಲ್ದಾರ್ ಅವರಿಗೆ ಪರಿಶೀಲಿಸುವಂತೆ ತಿಳಿಸಿದ್ದೇನೆ. ಪರಿಶೀಲಿಸಿದ ನಂತರ ಎಲ್ಲಾ ಮಾಹಿತಿ ದೊರೆಯಲಿದೆ. ನಮ್ಮ ಬಳಿ ರಾಜಮನೆತನಕ್ಕೆ ಸೇರಿದ ಆಸ್ತಿ ಎಂದು ಇದುವರೆಗೂ ಯಾವುದೇ ದಾಖಲೆ ದೊರೆತಿಲ್ಲ. ಅವರು ತಕರಾರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅದನ್ನು ಪರಿಶೀಲನೆ ನಡೆಸಲು ಹೇಳಿದ್ದೇವೆ. ಒಂದು ವಾರದೊಳಗೆ ದಾಖಲೆ ಪರಿಶೀಲಿಸಿ ವರದಿ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.





