ಮೈಸೂರು : ನಗರದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು.
ನಗರದ ದೇವರಾಜ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬ ಪ್ರಮುಖವಾದದು. ಹೊಸ ಸಂವತ್ಸರದ ಆರಂಭಕ್ಕೆ ಮುನ್ನುಡಿ ಬರೆಯುವ ಹಬ್ಬವನ್ನು ಹಿಂದುಗಳು ಹೊಸ ವರ್ಷದ ಆಗಮನವೆಂದು ಸಂಭ್ರಮದಿಂದ ಆಚರಿಸುತ್ತಾರೆ.
ಹೀಗಾಗಿ, ನಾಳಿನ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿ, ಹಣ್ಣು-ಹಂಪಲು, ಹೂ ಖರೀದಿಯಲ್ಲಿ ಮುಂದಾಗಿದ್ದರು. ಬೆಲೆ ಏರಿಕೆ ಹಾಗೂ ಬಿರು ಬಿಸಿಲನ್ನು ಲೆಕ್ಕಿಸದೇ ಜನರು ಅಂಗಡಿಗಳತ್ತ ಮುಖ ಮಾಡಿದ್ದರು.
ಹಬ್ಬದ ಹಿನ್ನೆಲೆ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ. ಕೆ.ಆರ್ ಮಾರುಕಟ್ಟೆ ರಸ್ತೆ, ದೇವರಾಜ ಅರಸು ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು.
ಗಗನಕ್ಕೇರಿದ ಬೆಲೆ: ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳ ಬೆಲೆ ಮೀಟರ್ ಗೆ 100 ರಿಂದ 150 ರೂ ನಿಗದಿ ಮಾಡಲಾಗಿತ್ತು. ಬಾಳೆ ಹಣ್ಣು ಕೆ.ಜಿ ಗೆ ರೂ 120 ಸೇರಿದಂತೆ ಹಲವು ಹಣ್ಣುಗಳ ಬೆಲೆ ಏರಿಕೆಯೂ ಗಗನಕ್ಕೆ ಏರಿತ್ತು.
ಪೂಜಾ ಹಾಗೂ ಹಣ್ಣು, ಹೂ ಸಾಮಾಗ್ರಿ ಖರೀದಿ ಒಂದೆಡೆಯಾದರೆ ಹೊಸ ಬಟ್ಟೆ ಖರೀದಿಗೆ ಅನೇಕರು ಬಟ್ಟೆ ಅಂಗಡಿಗಳತ್ತ ಮುಖ ಮಾಡಿದ್ದರು.