Mysore
29
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಮೈಸೂರು | ಪ್ರವಾಸಿ ತಾಣಗಳ ಅಭಿವೃದ್ಧಿ ಕ್ರಮಕ್ಕೆ ಡಿಸಿ ಸೂಚನೆ

ಮೈಸೂರು:  ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ವರದಿ ತಯಾರಿಸಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ  ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಮ್ ಸ್ಟೇ ಗಳು ಹಳ್ಳಿಗಳ ರೀತಿಯ ಅನುಭವ ನೀಡುವ ತಾಣಗಳು. ಹೋಮ್ ಸ್ಟೇ ಗಳಲ್ಲಿ 5 ರೂಮ್ ಗಳು ಮಾತ್ರ ಇರಬೇಕು. ನಗರ ಪ್ರದೇಶಗಳಲ್ಲಿ ಹೋಟೆಲ್ ಗಳನ್ನು ಹೋಮ್ ಸ್ಟೇ ಗಳಾಗಿ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಅವರು ಅಲ್ಲೇ ವಾಸವಿದ್ದು 5 ಕ್ಕಿಂತ ಕಡಿಮೆ ರೂಮ್ ಗಳನ್ನು ನಿರ್ಮಿಸಿಕೊಂಡಿದ್ದಾರೆ ಇದಕ್ಕೆ ಯಾವುದೇ ಕನ್ವರ್ಷನ್ ಬೇಕಿಲ್ಲ ಎಂದು ತಿಳಿಸಿ ಹಾಗೂ ಎನ್ ಓಸಿ ನೀಡಲು ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು.

ವರುಣಾ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ನೀಡಲಾಗಿದೆ ಅದೇ ರೀತಿ ಜಿಲ್ಲೆಯ ಕೆರೆಗಳಲ್ಲಿ ಪ್ರವಾಸಿ ಬೋಟಿಂಗ್ ವ್ಯವಸ್ಥೆ ಮಾಡಲು ಸಾಧ್ಯತೆ ಇರುವ ಎರಡು ಮೂರು ಕೆರೆಗಳನ್ನು ಗುರುತಿಸುವಂತೆ ಪ್ರವಾಸೋಧ್ಯಮ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ ಸವಿತಾ ಮಾತನಾಡಿ, ಹೊಮ್ ಸ್ಟೆ ಗಳು ವಾಣಿಜ್ಯ ಉದ್ಯಮಗಳು ಅಲ್ಲ. ಕೇಂದ್ರ ಪ್ರವಾಸೋಧ್ಯಮ ಇಲಾಖೆಯ ವತಿಯಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸೆಲ್ಪಿ ಪಾಯಿಂಟ್ ಗಳನ್ನು ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ಮೈಸೂರಿನ ಅಧಿಕೃತ ಲೋಗೋವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಇತರೆ ಕ್ಷೇತ್ರಗಳಲ್ಲಿ ಅಗತ್ಯವಾಗಿ ಬಳಸಬೇಕು ಎಂದು ತಿಳಿಸಿದರು.

ವರುಣಾ ಕೆರೆಯಲ್ಲಿ ಸಾಹಸ ಕ್ರೀಡೆಗಳು ಹಾಗೂ ಸದರಿ ಸ್ಥಳಗಳಲ್ಲಿ ಜಿಪ್ ಲೈನ್, ಸ್ಕೈ ಸೈಕಲ್ ಮತ್ತು ಜಾಯಿಂಟ್ ಸ್ವಿಂಗ್ ಎಂಬ ಹೆಚ್ಚುವರಿ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ ಅವರು ಪ್ರವಾಸೋಧ್ಯಮ ಇಲಾಖೆಯ ಸಾಮಾಜಿಕ ಜಾಲ ತಾಣವನ್ನು ಉನ್ನತ ಮಟ್ಟಕ್ಕೆ ಏರಿಸಲು ನೇರ ಪಾಲುದಾರರು ಅಥವಾ ಖಾಸಗಿ ಸಹಭಾಗಿತ್ವವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ 2.0 ಅಡಿಯಲ್ಲಿ ಮೈಸೂರಿನ ಫೇಸ್ 1ರಲ್ಲಿ ಮೃಗಾಲಯ ಹಾಗೂ ಕಾರಂಜಿ ಕೆರೆಯ ಒಳಗೊಂಡಂತೆ ಟಾಂಗಾ ರೈಡ್, ಎಕೋಲಾಜಿಕಲ್ ಎಕ್ಸ್ ಫೀರಿಯ್ಸ್ ಸಂಬಂಧ ಡಿಪಿಆರ್ ಸಲ್ಲಿಕೆಯಾಗಿದ್ದು ಟೆಂಡರ್ ಕರೆಯಲಾಗಿದೆ. ಸ್ವದೇಶ ದರ್ಶನ್ ಯೋಜನೆಯ 2ನೇ ಹಂತದಲ್ಲಿ ನಗರದ ಹೃದಯ ಭಾಗದಲ್ಲಿರುವ ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮ್ಯೂಸಿಯಂ ಪರಿವರ್ತನೆ ಮಾಡಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಡಿಪಿಆರ್ ಸಲ್ಲಿಸಿದ್ದು ಅಂತಿಮ ಅನುಮೋದನೆ ಹಾಗೂ ಅನುದಾನ ಬಿಡುಗಡೆಗೆ ಸಲ್ಲಿಸಿಲಾಗಿದೆ ಎಂದು ಪ್ರವಾಸೋದ್ಯಮ ಜಂಟಿ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ವಿವೇಕಾನಂದ, ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಡಿಸಿಎಫ್ ಡಾ. ಕೆ.ಎನ್. ಬಸವರಾಜು, ಡಿ.ಸಿ.ಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಜಿಎಸ್ ಎಸ್ ಯೋಗ ಸಂಸ್ಥೆಯ ಶ್ರೀ ಹರಿ, ಗೈಡ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

Tags:
error: Content is protected !!