Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು : ಡಿ.23ರಂದು ʻರೈತರ ರಾಜ್ಯ ಮಟ್ಟದ ಸಮಾವೇಶʼ

ಮೈಸೂರು: ವಿಶ್ವ ರೈತ ದಿನದ ಪ್ರಯುಕ್ತ  ಡಿ.23ರಂದು ಬೆಳಿಗ್ಗೆ 10ಕ್ಕೆ ʻರೈತರ ರಾಜ್ಯ ಮಟ್ಟದ ಸಮಾವೇಶʼ ವನ್ನು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಈ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು  ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಪ್ರಸ್ತುತ ದೇಶದಾದ್ಯಂತ ರೈತರು ಎದುರಿಸುತ್ತಿರುವ ಕೃಷಿ ಸಮಸ್ಯೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೇದಿಕೆಯ ಸಮಾರಂಭ ಅಂದು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಕೆಎಎಸ್‌ ಅಧಿಕಾರಿ ಕಾ. ರಾಮೇಶ್ವರಪ್ಪ ನೇತೃತ್ವದ ʻಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದವರು ʼಜಾನಪದ ಸಂಗೀತ ವೈಭವʼ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಜೆವೇಳೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವ ವಿ.ಸೋಮಣ್ಣ ಹಾಗೂ ಕೆಎಸ್‌ಒಯು ಕುಲಪತಿ ಪೊ.ಶರಣಪ್ಪ ಹಲಸೆ ಭಾಗವಹಿಸಲಿದ್ದಾರೆ.

ತಮಿಳುನಾಡಿನ ರೈತ ಮುಖಂಡ ಪಿ.ಆರ್‌. ಪಾಂಡ್ಯನ್‌, ಪರಿಸರ ವಿಜ್ಞಾನಿ ಚಂದ್ರಶೇಖರ ಬೀರಾದಾರ್‌, ತೆಲಂಗಾಣದ ವೆಂಕಟೇಶ್ವರ ಭಾಗವಹಿಸಲಿದ್ದಾರೆ.  ವೇದಿಕೆಯಲ್ಲಿ ನಾಡಿನ ಪ್ರಗತಿಪರ ರೈತ ಹಾಗೂ ಪರಿಸರ ಪ್ರೇಮಿಗಳಿಗೆ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುತ್ತಳ್ಳಿ ದೇವರಾಜು, ಬರಡನಪುರ ನಾಗರಾಜ್‌, ಮುಖಂಡ ಪೈಲ್ವನ್‌ ವೆಂಕಟೇಶ್‌ ಸೇರಿದಂತೆ ಇನ್ನಿತರರು ಇದ್ದರು.

Tags: