ಮೈಸೂರು: ಎಚ್.ಡಿ.ತಾಲ್ಲೂಕಿನ ವಿವಿಧೆಡೆ ಐಸ್‌ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಿದ್ದಾರೆ.
ಹೆಗ್ಗಡದೇವನಕೋಟೆ(ಎಚ್.ಡಿ. ಕೋಟೆ) ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಹಾಗೂ ಹಂಪಾಪುರ ಗ್ರಾಮದಲ್ಲಿರುವ ಐಸ್‌ಕ್ರೀಮ್ ತಯಾರಿಕಾ ಘಟಕಗಳಿಗೆ ಆಹಾರ ಸುರಕ್ಷತಾ ಅಧಿಕಾರಿ ಡಾ.ರವಿಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರತಿಯೊಂದು ಕಂಪೆನಿಯ ಐಸ್‌ಕ್ರೀಮ್‌ಗಳನ್ನು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿದೆ.
ಈ ಸಂದರ್ಭದಲ್ಲಿ ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್ ಅವರು ಮಾತನಾಡಿ, ಐಸ್‌ಕ್ರೀಮ್ ತಯಾರಿಸುವ ವೇಳೆ ಸ್ಥಳಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಪ್ರತಿಯೊಂದು ಐಸ್‌ಕ್ರೀಮ್‌ಗಳನ್ನು ತಯಾರಿಸುವಾಗ ಶುದ್ಧವಾದ ನೀರನ್ನು ಉಪಯೋಗಿಸಬೇಕು. ಯಾವುದೇ ರೀತಿಯ ಬಣ್ಣಗಳನ್ನು ಹಾಕಬಾರದು ಎಂದರು.
ಇನ್ನು ಫುಡ್ ಲೈಸನ್ಸ್ ಹೊಂದಿಲ್ಲದ ಘಟಕಗಳು ಕಡ್ಡಾಯವಾಗಿ ಒಂದು ವಾರದೊಳಗೆ ಲೈಸನ್ಸ್ ಪಡೆಯಬೇಕು. ಒಂದು ವೇಳೆ ಲೈಸೆನ್ಸ್ ಪಡೆಯದಿದ್ದರೆ ದಂಡ ವಿಧಿಸಿ ಕಾನೂನು ಕ್ರಮನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.





