ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ಸುಮಾರು 10 ಸಾವಿರ ಕೋಟಿಯಷ್ಟಿದೆ. ಇಲ್ಲಿನ ಪೊಲೀಸರಿಂದ ಈ ಪ್ರಕರಣದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಸಿಬಿಐನವರಿಂದ ಮಾತ್ರ ಇದರ ತನಿಖೆ ನಡೆಸಲು ಸಾಧ್ಯ. ಹೀಗಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ವೋಟು ತೆಗೆದುಕೊಂಡು ಅಹಿಂದ ಸಮುದಾಯಕ್ಕೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಮುಡಾ ಹಗರಣವನ್ನು ಅಷ್ಟು ಸುಲಭವಾಗಿ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇನ್ನೂ ಬದಲಿ ನಿವೇಶನ ಪಡೆದಿದ್ದೇನೆ ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಎಂಡಿಎ ಅಕ್ರಮದಲ್ಲಿ ನನ್ನ ಪಾಲು ಇದೆ ಎಂದಿದ್ದಾರೆ. ನನ್ನ ಪತ್ನಿಗೆ ದೇವನೂರು 3ನೇ ಹಂತದಲ್ಲಿ ನೀಡಿದ್ದ ನಿವೇಶನದ ಬಳಿ ವರುಣ ನಾಲೆ ಹಾದು ಹೋಗಿದೆ. ಆ ಸ್ಥಳ ಮನೆ ನಿರ್ಮಿಸಲು ಯೋಗ್ಯವಾಗಿರಲಿಲ್ಲ. ಹೀಗಾಗಿ ಬೇರೆಡೆ ನಿವೇಶನ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಆರೋಪ ಮಾಡಿರುವ ಮುಡಾದ ಅಧ್ಯಕ್ಷ ಓರ್ವ ಮೂಢ. ಶಾಸಕ ಕೆ.ಹರೀಶ್ ಗೌಡ ನೀಡಿರುವ ಹೇಳಿಕೆ ಸರಿಯಲ್ಲ. ಎಲ್ಲರೂ ಸೇರಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಹೀಗಾಗಿ, ಎಂಡಿಎನಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲೇಬೇಕು. ಇದು ದೊಡ್ಡ ಕರ್ಮಕಾಂಡವಾಗಿದೆ ಎಂದು ಆರೋಪಿಸಿದರು.





