Mysore
21
overcast clouds
Light
Dark

ಮೈಸೂರು ಮುಡಾದಲ್ಲಿ ನಡೆದ ಅಕ್ರಮ ಖಂಡಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ ವತಿಯಿಂದ ಪ್ರತಿಭಟನೆ

ಮೈಸೂರು: ಆರ್ಥಿಕವಾಗಿ ದುರ್ಬಲವಾದ ಬಡವರಿಗೆ ಮನೆ ಹಂಚಲು ಒತ್ತಾಯಿಸಿ ಹಾಗೂ ಮೈಸೂರು ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್‌ ಪಕ್ಷದ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ಮುಡಾ ಅಧಿಕಾರಿಗಳ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಆರ್ಥಿಕವಾಗಿ ಹಿಂದುಳಿದವರಿಗೆ, ಬಡವರಿಗೆ ಹಾಗೂ ಸೂರಿಲ್ಲದವರಿಗೆ ರಿಯಾಯಿತಿ ದರದಲ್ಲಿ ನೀಡಬೇಕಾದ ನಿವೇಶನವನ್ನು, ಮುಡಾವು ರಿಯಲ್‌ ಎಸ್ಟೇಟ್‌ ಕೋರರಿಗೆ, ದಲ್ಲಾಳಿಗಳಿಗೆ ನೀಡಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಮೈಸೂರಿನಲ್ಲಿ ಲಕ್ಷಾಂತರ ಜನರು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ. ಕೆಲವು ಜನ ಉಸಿರುಗಟ್ಟುವ ಸಣ್ಣ ಸಣ್ಣ ಮನೆಯಲ್ಲೇ ವಾಸವಿದ್ದಾರೆ. ಹೀಗಿರುವಾಗ ಮೂಡಾವು ಬಲಾಢ್ಯರಿಗೆ, ರಿಯಲ್‌ ಎಸ್ಟೇಟ್‌ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಮುಡಾದಲ್ಲಿ ಈಗ ಹಾಗೂ ಈ ಹಿಂದೆ ನಡೆದಿರುವ ಎಲ್ಲಾ ಹಗರಣಗಳ ಕುರಿತು ಸಮಗ್ರ ತನಿಖೆಯಾಗಬೇಕು. ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.