Mysore
19
few clouds
Light
Dark

ಮುಡಾದಲ್ಲಿ ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆಗೆ ಒತ್ತಾಯಿಸಿದ ಎಚ್.ವಿಶ್ವನಾಥ್‌

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಆರೋಪಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಸೇರಿದಂತೆ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಭೈರತಿ ಸುರೇಶ್‌ ಸ್ವತಃ ರಿಯಲ್‌ ಎಸ್ಟೇಟ್‌ ಗಿರಾಕಿ. ಸಿದ್ದು ಶಿಷ್ಯನಿಂದ ಮುಡಾ ಹಾಳಾಗಿದೆ. ಆತ ಹೇಳಿದ್ದಕ್ಕೆಲ್ಲಾ ಸಿದ್ದರಾಮಯ್ಯ ಸೈ ಎನ್ನುತ್ತಿರುವುದು ನಾಚಿಕೆಗೇಡು. ಇವರೆಲ್ಲಾ ಸೇರಿಕೊಂಡು ಅಧಿಕಾರಿಗಳ ಜೊತೆ ಸಿಂಡಿಕೇಟ್‌ ರಚಿಸಿಕೊಂಡಿದ್ದು ಅದಕ್ಕೆ ಡಾ.ಯತೀಂದ್ರ ನಾಯಕ. ಆತ ಬುದ್ದಿವಂತನೋ, ಮಂಗನೋ ಗೊತ್ತಿಲ್ಲ. ಅವರನ್ನು ಮುಂದಿಟ್ಟುಕೊಂಡೇ ಈ ದಂಧೆ ನಡೆಸಲಾಗುತ್ತಿದೆ ಎಂದು ದೂರಿದರು.

ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಅಟೆಂಡರ್‌ ರೀತಿ ಕಡತಗಳನ್ನು ಇಟ್ಟುಕೊಂಡು ಮುಡಾ ಕಚೇರಿಯಲ್ಲಿ ಓಡಾಡುತ್ತಿದ್ದಾರೆ. ಎಂಎಲ್‌ಸಿ ಡಾ.ಯತೀಂದ್ರ, ಶಾಸಕ ಹರೀಶ್‌ ಗೌಡ, ರಾಕೇಶ್‌ ಪಾಪಣ್ಣ, ಮುಡಾದ ಹಾಲಿ ಅಧ್ಯಕ್ಷ ಮರಿಗೌಡ, ಹಿಂದಿನ ಅಧ್ಯಕ್ಷ ಎಚ್.ವಿ.ರಾಜೀವ್‌, ಹಿಂದಿನ ಆಯುಕ್ತ ನಟೇಶ್‌, ಈಗಿನ ಆಯುಕ್ತ ದಿನೇಶ್‌ ಹಾಗೂ ಅವರ ಮೈದುನ ತೇಜಸ್‌ ಗೌಡ, ಮರಿತಿಬ್ಬೇಗೌಡರ ಶಿಷ್ಯ ಸುದೀಪ್‌, ದಲ್ಲಾಳಿಗಳಾದ ಉತ್ತಮ್‌ ಗೌಡ, ಮೋಹನ್‌ ಸೇರಿದಂತೆ ಹಲವರು ಈ ಭ್ರಷ್ಟಾಚಾರದಲ್ಲಿ ಭಾಗಿ ಆಗಿದ್ದಾರೆ. ಹೊರಗುತ್ತಿಗೆ ನೌಕರರನ್ನು ಇಟ್ಟುಕೊಂಡು ದಾಖಲೆಗಳನ್ನು ತಿದ್ದಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ಭೈರತಿ ಸುರೇಶ್‌ ಮುಡಾದ ದಾಖಲೆಗಳನ್ನು ಒಂದು ಟ್ರಕ್‌ನಲ್ಲಿ ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಅದರಲ್ಲಿ ಅದೇನು ತಿದ್ದುತ್ತಾರೋ ಎಂದು ಆತಂಕ ವ್ಯಕ್ತಪಡಿಸಿದರು.