ಮೈಸೂರು: ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆ ಹಾಗೂ ಎಂಎಎಸ್‌ಪಿ ಅಕ್ವಾಟಿಕ್ಸ್ ಕ್ಲಬ್‌ನ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಈಜುಕೊಳವನ್ನು ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಿದರು.
ನಗರದ ಲಲಿತಾದ್ರಿಪುರದ ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನೂತನವಾಗಿ ನಿಮಿ ಸಿರುವ ನಗರದ ಮೊದಲ ವಾರ್ಮ್ ಈಜುಕೊಳವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವವರಿಗೆ ಈಜು ಕಲಿಕೆ ಸಹಕಾರಿಯಾಗಲಿದೆ. ಲಲಿತಾದ್ರಿಪುರ ಭಾಗಕ್ಕೆ ಯಾವುದೇ ಈಜುಕೊಳವಿರಲಿಲ್ಲ. ಈ ಭಾಗದ ಈಜು ಪ್ರಿಯರು ನಗರ ಕೇಂದ್ರದಲ್ಲಿರುವ ಈಜುಕೊಳಗಳಿಗೆ ಆಗಮಿಸುತ್ತಿದ್ದರು. ಇದೀಗ ಹೊಸ ಈಜುಕೊಳ ನಿರ್ಮಾಣದಿಂದ ಆ ಕೊರತೆ ದೂರವಾಗಲಿದೆ. ಎಲ್ಲರೂ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ಈಜು ಜೀವ ರಕ್ಷಣೆಯ ಕಲೆಯಾಗಿದೆ. ಇದನ್ನು ಪ್ರತಿಯೊಬ್ಬರು ಕಲಿಯಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಿ.ಎಸ್.ಗುರು ಮಾತನಾಡಿ, ಈಜು ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಯಾಮವನ್ನು ನೀಡುವ ಕ್ರೀಡೆಯಾಗಿದೆ. ಮಕ್ಕಳು ಬಹುಮುಖ ಪ್ರತಿಭೆಗಳಾಗಿ ಹಾಗೂ ಆರೋಗ್ಯವಂತರಾಗಿ ಬೆಳೆಯಲು ಈಜು ಅನುಕೂಲವಾಗುತ್ತದೆ ಎಂದರು.
ಚಲನಚಿತ್ರ ನಟ ಶಂಕರ್ ಅಶ್ವಥ್ ಮಾತನಾಡಿದರು. ವೈ.ಎಸ್.ಪ್ರಾಪರ್ಟಿಸ್‌ನ ಕೆ.ಎನ್.ಸಂತೋಷ್, ಕೆ.ಎಚ್.ಕಿರಣ್, ಸೇಫ್ ವ್ಹೀಲ್ ಟ್ರಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್, ಕೆಬಿಎಲ್ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಡಾ.ದೀಪ್ತಿ ಚತುರ್ವೇದಿ ಮತ್ತಿತರರು ಹಾಜರಿದ್ದರು.





