ಮೈಸೂರು: ಹೆಚ್ಚಿನ ಲಾಭದ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ವಂಚಕರ ಮಾತಿಗೆ ಮರುಳಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೂಲಕ ಬರೋಬ್ಬರಿ 22.15 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ನಗರದ ಬೋಗಾದಿ ನಿವಾಸಿ ಆಗಿರುವ ವ್ಯಕ್ತಿ ವೆಲ್ತಪ್ ಮಾರ್ಕೆಟ್ 138 ಎಂಬ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ. ನಂತರ ವಾಟ್ಸಾಪ್ ಗ್ರೂಪ್‌ಗೆ ಸೇರುವಂತೆ ಅವರಿಗೆ ಅನ್ಯರು ಸಂದೇಶ ಕಳಿಸಿದ್ದಾರೆ.
ಅವರ ಮಾತನ್ನು ನಂಬಿದ ಅವರು ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದಾರೆ. ಷೇರು ಮಾರುಕಟ್ಟೆ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಲಕ್ಷಾಂತರ ರೂ. ಗಳಿಸಬಹುದು ಎಂದು ಖದೀಮರು ಆಸೆ ಹುಟ್ಟಿಸಿದ್ದಾರೆ. ಅವರ ಮಾತನ್ನು ನಂಬಿದ ಅವರು ಹಂತ ಹಂತವಾಗಿ 22.15 ಲಕ್ಷ ರೂ. ಹಣವನ್ನು ಅವರು ಹೇಳಿದ ಖಾತೆಗೆ ಜಮೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





