ಮೈಸೂರು : ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಮೈಸೂರು ಅರಮನೆಯಲ್ಲಿ ದಸರಾ ಆಚರಣೆ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆ ಪ್ರಾರಂಭವಾಗಿದೆ. ರಾಜ ವಂಶಸ್ಥರ ಶರನ್ನವರಾತ್ರಿ ಆಚರಣೆಗಳು ಅರಮನೆಯಲ್ಲಿ ನಡೆಯುವುದರಿಂದ ಕೆಲ ದಿನಗಳಲ್ಲಿ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧ ಮಾಡಲಾಗಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ ವಂಶಸ್ಥರ ಶರನ್ನವರಾತ್ರಿಯ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 9 ರಂದು ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯುವುದರಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನದವರೆಗೆ ಅರಮನೆಗೆ ಪ್ರವಾಸಿಗರ ನಿರ್ಬಂಧ ವಿಧಿಸಲಾಗಿದೆ.
ಇದರ ಜೊತೆಗೆ, ಅಕ್ಟೋಬರ್ 15 ರಂದು ಶರನ್ನವರಾತ್ರಿಯ ಮೊದಲ ದಿನ ಖಾಸಗಿ ದರ್ಬಾರ್ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಅರಮನೆಯ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೆಯೇ, ಅಕ್ಟೋಬರ್ 23 ರಂದು ಆಯುಧ ಪೂಜೆ ಇರುವುದರಿಂದ 10 ರಿಂದ 2 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.
ಜಂಬೂ ಸವಾರಿಯ ಇಡೀ ದಿನ ಅರಮನೆ ಪ್ರವೇಶಕ್ಕೆ ನಿರ್ಬಂಧ : ಅಕ್ಟೋಬರ್ 24 ರ ವಿಜಯದಶಮಿ ದಿನ ಬೆಳಗ್ಗೆ ಅರಮನೆಯಲ್ಲಿ ಮೆರವಣಿಗೆ ನಡೆಯಲಿದ್ದು, ಆನಂತರ ಮಧ್ಯಾಹ್ನ ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆ ಇರುವ ನಿಮಿತ್ತ ಇಡೀ ದಿನ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿಷೇಧ ಮಾಡಲಾಗಿದೆ. ಪಾಸ್ ಇದ್ದವರು ಅರಮನೆಯ ಅಂಗಳದಲ್ಲಿ ಜಂಬೂ ಸವಾರಿ ವೀಕ್ಷಣೆ ಮಾಡಬಹುದು ಎಂದು ತಿಳಿಸಲಾಗಿದೆ.
ಇದರ ಜೊತೆಗೆ, ನವೆಂಬರ್ 8 ರಂದು ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಅರಮನೆಯ ಪ್ರವೇಶವನ್ನು ನಿಷೇಧ ಮಾಡಲಾಗಿದೆ ಎಂದು ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಒಟ್ಟಾರೆ, ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನಡೆಸುವ ರಾಜ ಪರಂಪರೆಯ ಶರನ್ನವರಾತ್ರಿಯ ಪೂಜಾ ಕಾರ್ಯಕ್ರಮಗಳಿಗೆ ಈಗಿನಿಂದಲೇ ತಯಾರಿ ಪ್ರಾರಂಭವಾಗಿದೆ. ರತ್ನಖಚಿತ ಸಿಂಹಾಸನ ಜೋಡಣೆ, ಖಾಸಗಿ ದರ್ಬಾರ್, ಅರಮನೆಯಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ರಾಜ ಪರಂಪರೆಯಂತೆ ಶರನ್ನವರಾತ್ರಿಯ ಪೂಜಾ ಕಾರ್ಯ ನೆರವೇರಿಸಲಿದ್ದಾರೆ.





