Mysore
21
overcast clouds
Light
Dark

ನಾಳೆ ಮೊದಲ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ: ಬಿಗಿ ಪೊಲೀಸ್‌ ಬಂದೋಬಸ್ತ್‌

ಮೈಸೂರು: ನಾಳೆ ಮೊದಲನೇ ಆಷಾಢ ಶುಕ್ರವಾರದ ಪ್ರಯುಕ್ತ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಬೆಟ್ಟದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.

ನಾಳೆ ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದು, ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಉಪಹಾರ, ಪ್ರಸಾದ ವಿತರಣೆ, ವಾಹನಗಳ ನಿಲುಗಡೆ, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧತೆ ನಡೆಸಲಾಗಿದೆ.

ಸರತಿ ಸಾಲಿನಲ್ಲಿ ದರ್ಶನಕ್ಕೆ ಹೋಗುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ನೂಕುನುಗ್ಗಲು ಉಂಟಾಗಬಹುದು ಎಂದು ಬ್ಯಾರಿಕೇಡ್‌ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ಇನ್ನೂ ಚಾಮುಂಡಿಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಚಾಮುಂಡಿಬೆಟ್ಟದ ಪಾದದಲ್ಲೂ ಹಲವಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಲಿತ ಮಹಲ್‌ ಹೆಲಿಪ್ಯಾಡ್‌ ಬಳಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಬೆಟ್ಟಕ್ಕೆ ತೆರಳುವ ಬಸ್‌ಗಳು ನಿಲ್ಲುವ ಸ್ಥಳಗಳಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇನ್ನೂ ನಾಳಿನ ಬಿಗಿ ಭದ್ರತೆಯ ಬಗ್ಗೆ ಇಂದು ರಾಜೇಂದ್ರ ಕಲಾಮಂದಿರದಲ್ಲಿ ಎಲ್ಲಾ ಪೊಲೀಸರಿಗೂ ಸೂಚನೆ ನೀಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಟ್ಟಕ್ಕೆ ಬರುವ ಗಣ್ಯಾತಿಗಣ್ಯರಿಗೂ ಯಾವುದೇ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ಎಲ್ಲರೂ ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಖಡಕ್‌ ಸೂಚನೆ ನೀಡಿದ್ದಾರೆ.