ಮೈಸೂರು: ನಾಡಿನ ಹಲವೆಡೆ ಜಾತಿ ಆಧಾರಿತ ಮಠಗಳೆ ಹೆಚ್ಚು, ಈ ಮಧ್ಯೆ ಸಿದ್ಧಗಂಗಾ ಮಠ ಜಾತ್ಯತೀತ, ಧರ್ಮಾತೀತವಾಗಿ ಬೆಳೆದು ಬಂದಿರುವ ಶ್ರೇಷ್ಠ ಮಠವಾಗಿದೆ. ಇದು ಇತರ ಮಠಗಳಿಗೆ ಮಾದರಿಯಾಗಲಿ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಭಿಪ್ರಾಯಪಟ್ಟರು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ‘‘ಡಾ. ಶಿವಕುವಾರ್ ಸ್ವಾಮೀಜಿ ಅವರ 118ನೇ ಜಯಂತಿ ಮಹೋತ್ಸವ ಹಾಗೂ ವಿಷ್ಣುಸಂಕಲ್ಪ ಜ್ಯೋತಿಷ್ಯ ಕೇಂದ್ರ ಉದ್ಘಾಟನೆ’ಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ‘‘ಸಿದ್ಧಗಂಗಾ ಮಠ ಅಂದು ಹತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಿಕ್ಷಣಭ್ಯಾಸ ಇಂದು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತಲುಪಿದೆ. ಅಂದು ಹಚ್ಚಿದ ಅನ್ನದಾಸೋಹದ ಒಲೆ ಇಂದು ಆರದೆ ಉರಿಯುತ್ತಲೇ ಇದೆ ಎಂದು ಹೇಳಿದರು.
‘‘ಆಶ್ರಯ, ಅಕ್ಷರ, ದಾಸೋಹದ ಜೊತೆಗೆ ಆರೋಗ್ಯದ ಸೇವೆಯನ್ನ ಶಿವಕುಮಾರ್ ಸ್ವಾಮಿಜೀಗಳೆ ನೀಡುತಿದ್ದರು. ಸ್ವಾಮಿಜೀ ಅವರು ಮುಂದಿನ ನೂರು ವರ್ಷಗಳಿಗಾಗುವ ಸಂಪತ್ತು ಸಿದ್ಧಗಂಗಾ ಮಠಕ್ಕಾಗಿ ಉಳಿಸಿ ಹೋಗಿದ್ದಾರೆ. ಅವರ ಅದ್ವಿತೀಯ ಕಾರ್ಯಕ್ಕಾಗಿ ದೇಶದಲ್ಲದೇ ವಿದೇಶಿಗರು ಸಹ ಮನಸೊತು ಸಹಾಯ ಹಸ್ತ ಚಾಚಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಇಂತಹ ಸ್ವಾಮಿಜೀಯನ್ನ ಪಡೆದ ನಮ್ಮ ನಾಡು ಸರ್ವ ಶ್ರೇಷ್ಠ ಎಂದು ಶ್ಲಾಘಿಸಿದರು.
ಬಳಿಕ ಸಾಹಿತಿ ಹಾಗೂ ಸಂಸ್ಕೃತ ವಿದ್ವಾಂಸೆ ಡಾ.ಕೆ.ಲೀಲಾ ಪ್ರಕಾಶ್ ಮಾತನಾಡಿ, ಶಿವನು ಸರ್ಪಭೂಷಣವಾದರೆ, ಶಿವಕುಮಾರ ಸ್ವಾಮಿಜೀಗಳು ಪದ್ಮಭೂಷಣರು. ದೇವರು ಸ್ವಾಮಿಗಳಿಗೆ ವಿಶೇಷವಾದ ಶಕ್ತಿ ನೀಡಿದ್ದನು. ಹಲವು ಮಠಮಾನ್ಯಗಳಲ್ಲಿ ಯಾರಿಗೂ ಸುಮ್ಮನೆ ದಾಸೋಹ ಮಾಡುತ್ತಿರಲಿಲ್ಲ. ಎಲ್ಲರಲ್ಲೂ ಕಾಯಕವನ್ನ ಮಾಡಿಸಿ ದಾಸೋಹ ಮಾಡುತಿದ್ದರು. ಅದರಿಂದ ವಿದ್ಯಾರ್ಥಿಗಳಲ್ಲಿ ಭಕ್ತಿ, ಜವಬ್ದಾರಿ ಹಾಗೂ ನಿಜ ಜೀವನದ ಬದ್ದತೆ ಕಾಣುವಂತಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಶಿಸ್ತು ಕಲಿಯುವಂತಾಗುತಿತ್ತು. ಶಿವಕುಮಾರ್ ಸ್ವಾಮಿಜೀ ಅವರು ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಬೇವಿನ ಕಷಾಯ ಸೇವಿಸುತಿದ್ದರು. ಆದರೆ ಇಡೀ ಸಮಾಜಕ್ಕೆ ಸಿಹಿ ಉಣಬಡಿಸಿದರು ಎಂದು ತಿಳಿಸಿದರು.
ಮೈಸೂರು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯ ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿಯಂತೆ ಪ್ರತಿ ವರ್ಷ ಎಲ್ಲಾ ಕಡೆಗಳಲ್ಲಿ ಡಾ.ಶಿವಕುಮಾರ್ ಜಯಂತಿ ಆಚರಣೆ ಮಾಡುವಂತಹ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಪ್ರಸ್ತಾಪಿಸಿದರು.
ಬಳಿಕ ಡಾ.ಶಿವಕುಮಾರ್ ಸ್ವಾಮಿಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ‘‘ವಿಷ್ಣುಸಂಕಲ್ಪ ಜ್ಯೋತಿಷ್ಯ ಕೇಂದ್ರ ಉದ್ಘಾಟನೆ’’ಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಖ್ಯಾತ ಜ್ಯೋತಿಷಿಗಳಾದ ಶ್ರೀ ವಿಷ್ಣು, ಸಾಲಿಗ್ರಾಮ ಸ್ವಾಮಿ, ಹಿರಿಯ ಸವಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ಅಧ್ಯಕ್ಷ ಬಸವರಾಜೇದ್ರ ಸ್ವಾಮಿ, ಹಿರಿಯ ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಚಲನಚಿತ್ರ ನಟ ಸುಪ್ರೀತ್, ಹಿರಿಯ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ, ಲಯನ್ಸ್ ಗೋಲ್ಡನ್ ಟಿ.ಸುರೇಶ್ ಹಾಜರಿದ್ದರು.





