Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು: ಮೇಲಧಿಕಾರಿಗಳ ಕಿರುಕುಳ ಆರೋಪ; ಎಫ್‌ಡಿಎ ಅಧಿಕಾರಿ ಆತ್ಮಹತ್ಯೆ

ಮೈಸೂರು: ಸರ್ಕಾರಿ ನೌಕರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ 32ವರ್ಷದ ಪ್ರಜ್ವಲ್‌ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೇಲಧಿಕಾರಿಗಳಾದ ತಹಶೀಲ್ದಾರ್ ಪ್ರವೀಣ್, ಶಿರಸ್ತೇದಾರ್ ಗುರುರಾಜ್ ವಿರುದ್ಧ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದೆ.

ಮಡಿಕೇರಿ ತಹಶೀಲ್ದಾರ್ ಕಚೇರಿ ಬಿಲ್ಲಿಂಗ್ ವಿಭಾಗದಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಪ್ರಜ್ವಲ್‌ಗೆ ಆರು ತಿಂಗಳಿಂದ ತಹಸೀಲ್ದಾರ್ ಹಾಗೂ ಶಿರಸ್ತೇದಾರ್‌ ಮಾನಸಿಕ ಕಿರುಕುಳ ನೀಡುತ್ತಿದ್ದರು. ಜೊತೆಗೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಜ್ವಲ್‌ ತಾಯಿ, ಪತ್ನಿ ಜತೆ ನೋವು ತೋಡಿಕೊಂಡಿದ್ದರು.

ಇತ್ತೀಚೆಗೆ ಫೆಸ್ಟಿವಲ್ ಅಡ್ವಾನ್ಸ್ ಬಿಲ್‌ನಲ್ಲಿ ತಹಸೀಲ್ದಾರ್ ಸಹಿ ಹೋಲಿಕೆ ಆಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ‘ನೀನೇ ಸಹಿ ಮಾಡಿದ್ದೀಯ’ ಎಂದು ಪ್ರಜ್ವಲ್ ಮೇಲೆ ಆರೋಪ ಮಾಡಿದ್ದ ತಹಸೀಲ್ದಾರ್ ಪ್ರವೀಣ್
ಮೀಟಿಂಗ್ ಮಾಡಿ ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ಹೇಳಲಾಗಿದೆ.

ಕಾಲು ಹಿಡಿದು ಬೇಡಿಕೊಂಡರೂ ಬಾಯಿಗೆ ಬಂದಂತೆ ಅಧಿಕಾರಿಗಳು ಮಾತನಾಡುತ್ತಿದ್ದರು. ಇದರಿಂದ ಮನನೊಂದ ಪ್ರಜ್ವಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುವಾಗಲೇ ಪೊಲೀಸರನ್ನು ಭೇಟಿ ಮಾಡಲು ಮೃತ ಪ್ರಜ್ವಲ್ ಬಯಸಿದ್ದರು. ಲಿಖಿತ ಹೇಳಿಕೆಯನ್ನು ಮೈಸೂರಿನ ಅಶೋಕಪುರಂ ಠಾಣೆಗೆ ಕಳುಹಿಸಿದ್ದರು ಪೊಲೀಸರು ಬರುವ ಮುನ್ನವೇ ಪ್ರಜ್ವಲ್‌ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರಜ್ವಲ್ ಪತ್ನಿ ಬಿ‌.ಜೆ.ಶೃತಿ ಪೊಲೀಸರಿಗೆ ದೂರು ನೀಡಿದ್ದಾರೆ.

Tags: