ಮೈಸೂರು : ಮೈಸೂರು ಮೂಲದ ಯುವಕನೋರ್ವ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಮೃತನಿಗೆ ಮದುವೆಯಾಗಿ ಎರಡು ವರ್ಷವಾಗಿದ್ದು, ಒಂದು ವರ್ಷದ ಹೆಣ್ಣು ಮಗು ಇದೆ.
ಬೆಂಗಳೂರಿನಲ್ಲಿ ವಾಸವಿದ್ದ 27 ವರ್ಷದ ಶಿವರಾಜು ಹೃದಯಾಘಾತಕ್ಕೆ ಬಲಿಯಾದ ಯುವಕ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೆಂಕಿಪುರ ಗ್ರಾಮದ ನಿವಾಸಿಯಾಗಿರುವ ಶಿವರಾಜು ಕಳೆದ ಐದು ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಕಾರಿನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆ, ತಾಯಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಸ್ವಗ್ರಾಮದ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.





