ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದ ಪರಿಣಾಮ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಹಾಗೂ ಹಾಲಿ ಸಂಸದ ಜಿ.ಕುಮಾರನಾಯ್ಕ್ ಶನಿವಾರ ಲೋಕಾಯುಕ್ತ ಕಚೇರಿಗೆ ತೆರಳಿ ನಿವೇಶನ ಹಂಚಿಕೆ ಸಂಬಂಧ ಮಾಹಿತಿ ನೀಡಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ, ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿತ್ತು. ಈ ಆದೇಶದ ಮೇರೆಗೆ ತನಿಖೆ ನಡೆಸಿ ವಿಚಾರಣೆ ನಡೆಸಿದ ಲೋಕಾಯುಕ್ತ ಎಸ್.ಪಿ.ಉದೇಶ್, ಮುಡಾ ನಿವೇಶನ ಹಂಚಿಕೆಯಾದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಕುಮಾರ್ ನಾಯ್ಕ್ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಮತ್ತು ಹೇಳಿಕೆಗಳನ್ನು ಪಡೆದಿದ್ದಾರೆ.
ಜಿ.ಕುಮಾರನಾಯ್ಕ್ ಹೇಳಿದ್ದೇನು?
ಮುಡಾ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದರು. ಹೀಗಾಗಿ ನಾನು ಇಂದು ಬೆಳಿಗ್ಗೆ ಕಚೇರಿಗೆ ತೆರಳಿದ್ದೆ. ಸುಮಾರು ಎರಡೂ ಗಂಟೆಗಳ ಕಾಲ ಪ್ರಶ್ನಾವಳಿ ನಡೆಸಿ ನನ್ನಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಈ ಘಟನೆ ನಡೆದು 20 ವರ್ಷಗಳೇ ಕಳೆದಿವೆ. ಆದರೂ, ಸಹ ನನಗೆ ತಿಳಿದಿರುವಷ್ಟು ನಾನು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿಯನ್ನು ಒದಗಿಸಿದ್ದೇನೆ ಎಂದು ಹೇಳಿದರು.





