Mysore
20
overcast clouds
Light
Dark

ಸಿಎಂ ಕುಟುಂಬದ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಲು ಒತ್ತಾಯ

ಮೈಸೂರು: ದಲಿತ ಕುಟುಂಬದಿಂದ ಜಮೀನು ಪಡೆದ ಸಿದ್ದರಾಮಯ್ಯ ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ದಲಿತರಿಗೆ ಹಾಗೂ ಜಮೀನು ಮಾಲೀಕ ನಿಂಗ ಎಂಬುವವರ ಕುಟುಂಬಕ್ಕೆ ವಂಚನೆ ಮಾಡಿ, ಅವರಿಗೆ ಸೇರಬೇಕಾದ ಕೋಟ್ಯಾಂತರ ರೂ. ಬೆಲೆ ಬಾಳುವ ನಿವೇಶನವನ್ನು ತಮ್ಮ ಪತ್ನಿ ಪಾರ್ವತಿ ಹೆಸರಿಗೆ ಪಡೆದುಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರ ಕುಟುಂಬ ದಲಿತರಿಗೆ ವಂಚಿಸಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಮೀನಿಗೆ ಸಂಬಂಧಿಸದ ಹಾಗೂ ಆ ಜಮೀನಿಗೆ ಯಾವುದೇ ಹಕ್ಕು ಬಾಧ್ಯತೆಗೆ ಒಳಪಡದವರಿಂದ ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಜಮೀನು ಬರೆಸಿಕೊಂಡಿದ್ದಾರೆ. ಅಲ್ಲದೇ ನಿಯಮ ಬಾಹಿರವಾಗಿ ದಲಿತರ ಜಮೀನನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಸೃಷ್ಟಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ದಲಿತ ಕುಟುಂಬ ಹಾಗೂ ಮೂಲ ಜಮೀನಿನ ಮಾಲೀಕನಿಗೆ ಅನ್ಯಾಯವಾಗಿದೆ. ನಿಯಮ ಉಲ್ಲಂಘಿಸಿ ದಲಿತರಿಗೆ ಅನ್ಯಾಯ ಮಾಡಿರುವುದರಿಂದ ಸಿದ್ದರಾಮಯ್ಯ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಪತ್ನಿ ಪಾರ್ವತಿ ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ, ಭಾರತೀಯ ದಂಡ ಸಂಹಿತೆ ಸೂಕ್ತ ಕಾಲಂ ಪ್ರಕಾರ ಪ್ರಕರಣ ದಾಖಲಿಸಿ ತುರ್ತು ವಿಚಾರಣೆ ನಡೆಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.