ಮೈಸೂರು : ಮುಡಾ ನಿವೇಶನದ ಶೇ ೨೫ ಮೊತ್ತದ ದಂಡವನ್ನ ತಪ್ಪಿಸಲು ಮಾಜಿ ಸಂಸದ ಪ್ರತಾಪ್ ಸಿಂಹ ವಾಮಮಾರ್ಗ ಅನುಸರಿಸಿದ್ದಾರೆಂದು ಮುಡಾ ಅಧ್ಯಕ್ಷ ಕೆ.ಮರಿಗೌಡ ಗಂಭೀರ ಆರೋಪ ಮಾಡಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಪ್ರತಾಪ್ ಸಿಂಹ ಮಾಡಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ , ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಆದರೆ ಮಾಜಿ ಸಂಸದ ಪ್ರತಾಪ ಸಿಂಹ ತಮ್ಮ ಪತ್ನಿಯ ಹೆಸರಿನಲ್ಲಿ ಜಿ ಕ್ಯಾಟೆಗೆರಿಯಲ್ಲಿ ನಿವೇನ ಪಡೆದಿದ್ದಾರೆ. ಸದರಿ ನಿವೇಶನದಲ್ಲಿ ಮನೆ ನಿರ್ಮಿಸಬೇಕಾಗಿರುತ್ತದೆ. ತಪ್ಪಿದಲ್ಲಿ ಶೇ.೨೫ ರಷ್ಟು ನಿವೇಶನ ಮೌಲ್ಯದ ದಂಡ ಕಟ್ಟಬೇಕು. ಆದರೆ ಪ್ರತಾಪ್ ಸಿಂಹ ಮನೆ ನಿರ್ಮಿಸದೇ ಕೇವಲ ಶೀಟಿನ ರೂಮನ್ನೇ ಮನೆ ಎಂದು ಬಿಂಬಿಸಿ ದಂಡದಿಂದ ತಪ್ಪಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ೯-೮- ೨೦೨೦ ರಂದು ನಕ್ಷೆ ಮಂಜೂರಾತಿ ಪಡೆದು ನಿವೇಶನದಲ್ಲಿ ಎಸಿ ಶೀಟಿನ ರೂಮ್ ಮಾತ್ರ ನಿರ್ಮಿಸಿದ್ದಾರೆ. ಬಳಿಕ ಅಕ್ಟೋಬರ್ ೪ ೨೦೨೧ ರಂದು ಎಸಿ ಶೀಟಿನ ರೂಮ್ ಅನ್ನೆ ಮನೆ ಎಂದು ಬಿಂಬಿಸಿ ಕಟ್ಟಡ ಪೂರ್ಣಗೊಂಡ ವರದಿ ಪಡೆದಿದ್ದಾರೆ. ಆ ನಂತರ ಸದರಿ ಕಟ್ಟಡ ಮನೆ ಕಂದಾಯವನ್ನು ಅಕ್ಟೋಬರ್ ೨೧ ೨೦೨೧ ರಂದು ನಿಗದಿಪಡಿಸಿ ೧೦-೧೧-೩೧ ರಂದು ಕ್ರಯ ಪತ್ರ ಪಡೆದಿದ್ದಾರೆ. ಸದರಿ ಕಟ್ಟಡದ ಬಗ್ಗೆ ದೂರು ಸ್ವೀಕೃತವಾದ ಹಿನ್ನೆಲೆ ಈ ಹಿಂದೆ ನೀಡಲಾದ ಕಟ್ಟಡ ಪೂರ್ಣಗೊಂಡ ವರದಿಯನ್ನು ಸೆಪ್ಟೆಂಬರ್ ೨೭ ೨೦೨೩ ರಲ್ಲಿ ಮುಡಾ ರದ್ದು ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.





