ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ತನಿಖೆಗೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಬುಧವಾರ ಲೋಕಾಯುಕ್ತ ಎಸ್.ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಮಧ್ಯಾಹ್ನ 4ರಿಂದ ಸಂಜೆ 7ರವರೆಗೆ ರಾಜೀವ್ ಅವರನ್ನು ತನಿಖಾಧಿಕಾರಿಗಳ ತಂಡವು, ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ ಪಾರ್ವತಿ ಅವರಿಗೆ 14 ಬದಲಿ ನಿವೇಶನ ಸೇರಿದಂತೆ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಸಂಬಂಧ ವಿಚಾರಣೆಗೆ ಒಳಪಡಿಸಿತು.
ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಜೀವ್, ಲೋಕಾಯುಕ್ತ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇನೆ. ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡುವಂತೆ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು. ಅದನ್ನು ಮುಡಾ ಸಾಮಾನ್ಯ ಸಭೆಯಲ್ಲಿಟ್ಟು ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಂಬಂಧ ಸಿದ್ದರಾಮಯ್ಯ ನನಗೆ ಕರೆ ಮಾಡಿರಲಿಲ್ಲ. ಯಾರ ಪ್ರಭಾವ ಬೀರಿರಲಿಲ್ಲ. ಅನವಶ್ಯಕವಾಗಿ ಸಿದ್ದರಾಮಯ್ಯ ಕುಟುಂಬವನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಹಿಂದಿನಿಂದಲೂ 50:50ಅನುಪಾತದಲ್ಲಿ ಬದಲಿ ನಿವೇಶನಗಳನ್ನು ನೀಡಲಾಗಿದೆ. ಬದಲಿ ನಿವೇಶನ ಹಂಚಿಕೆ ಸರಿಯೋ, ತಪ್ಪೋ ಎಂಬುದನ್ನು ನ್ಯಾಯಲಯವೇ ನಿರ್ಧರಿಸಬೇಕು. ಯಾರೋ ಹೇಳಿದರೆ ಒಪ್ಪಲಾಗದು ಎಂದರು.