ಮೈಸೂರು: ಮುಡಾ ಪ್ರಕರಣದ 50;50 ಅನುಪಾತದ ನಿವೇಶನ ವಿಚಾರವಾಗಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮುಡಾ ಮಾಜಿ ಆಯುಕ್ತ ಟಿ.ಬಿ.ನಟೇಶ್ ಕುಮಾರ್ ಅವರಿಗೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಯನ್ನು ತನಿಖೆ ನಡೆಸಲು ರಾಜ್ಯ ಗೃಹ ಇಲಾಖೆ ಅನುಮತಿ ಪಡೆದಿದ್ದರು. ಈ ಅನುಮತಿಯ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ಪ್ರಕರಣದಲ್ಲಿ ಎ1 ಆರೋಪಿ ಸಿಎಂ ಸಿದ್ದರಾಮಯ್ಯ, ಎ2 ಆರೋಪಿ ಪಾರ್ವತಿ ಸಿದ್ದರಾಮಯ್ಯ, ಎ3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎ4 ಆರೋಪಿ ದೇವರಾಜು ಅವರನ್ನು ವಿಚಾರಣೆ ನಡೆಸಿದೆ. ಅಲ್ಲದೇ ವಿಚಾರಣೆಯೂ ಅಂತಿಮ ಘಟ್ಟಕ್ಕೆ ಬಂದಿದ್ದು, ಮುಡಾ ಮಾಜಿ ಆಯುಕ್ತ ಟಿ.ಬಿ.ನಟೇಶ್ ಅವರ ವಿಚಾರಣೆಯ ನಂತರ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.