ಮೈಸೂರು: ಕಟ್ಟೆಮಾಡು ದೇವಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಕೊಡವ ಸಮುದಾಯದ ಸದಸ್ಯರನ್ನು ಪೊಲೀಸರು ಬಂಧಿಸಿರುವುದಕ್ಕೆ ತೀವ್ರ ವಿರೋಧಿಸುತ್ತೇನೆ ಎಂದು ಹೇಳುವ ಮೂಲಕ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡವ ಸಮುದಾಯದ ಪರ ನಿಂತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕೊಡವ ಸಮುದಾಯದ ಸದಸ್ಯರನ್ನು ಪೋಲಿಸರು ಬಂಧಿಸಿರುವುದರ ಕುರಿತು ತೀವ್ರವಾಗಿ ವಿರೋಧಿಸುತ್ತೇನೆ. ಕೊಡಗು ಜಿಲ್ಲಾಡಳಿತ ಈ ರೀತಿಯ ವಿವಾದಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಬಗೆಹರಿಸಬೇಕು. ಎರಡೂ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಟ್ಟೆಮಾಡು ದೇವಾಲಯದ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ಇಂದು ಬೆಳಿಗ್ಗೆ ಕೊಡವ ಸಮುದಾಯದ ಸದಸ್ಯರನ್ನು ಪೋಲಿಸರು ಬಂಧಿಸಿರುವುದು ಖಂಡನೀಯ, ಕೊಡಗಿನಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ. ಕೊಡಗಿನ ಕೆಲವು ಕಡೆ ರಸ್ತೆ ತಡೆ ಮತ್ತು ಬಂದ್ ಆಗಿರುವುದು ಕಂಡು ಬಂದಿದೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಕೊಡಗಿನಲ್ಲಿ ಜಿಲ್ಲಾಡಳಿತ ಶಾಂತಿ ನೆಲೆಸುವ ಪ್ರಯತ್ನ ಮಾಡಬೇಕೇ ಹೊರತು ಶಾಂತಿ ಕದಡುವ ಪ್ರಯತ್ನ ಆಗಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಂತಿಪ್ರಿಯರ ನಾಡಾದ ಕೊಡಗು ಜಿಲ್ಲೆಯಲ್ಲಿ ಎರಡು ಕಡೆಯವರನ್ನು ಕೂರಿಸಿ ಸಂಧಾನ ನಡೆಸುವ ಮೂಲಕ ಜಿಲ್ಲಾಡಳಿತ ಈ ವಿವಾದಗಳನ್ನು ಮುಗಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.





