ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡನೆ ಮಾಡಿರುವ ಬಜೆಟ್ ಬಗ್ಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ಸುಮಾರು 19,262 ಕೋಟಿ ರೂ. ಆದಾಯದ ಕೊರತೆಯಿದೆ. ಅಲ್ಲದೇ 7.64 ಲಕ್ಷ ಕೋಟಿ ರೂ. ಒಟ್ಟು ಆರ್ಥಿಕ ಹೊಣೆಗಾರಿಕೆಗೆ ತಂದಿದೆ. ಹೀಗಾಗಿ ಜಿಎಸ್‌ಡಿಪಿ ಶೇ.24.91% ಆಗಿದೆ. ಆದರೆ ಎಫ್‌ಆರ್‌ಬಿಎಂ ಕಾಯ್ದೆಯ ಪ್ರಕಾರ ಶೇ.25% ರಷ್ಟು ಮಿತಿಯನ್ನು ಶೀಘ್ರದಲ್ಲೇ ಉಲ್ಲಂಘಿಸಲಿದೆ ಎಂದು ಆರೋಪಿಸಿದ್ದಾರೆ.
ಸಾಲ ಮರುಪಾವತಿಯನ್ನು ಬಜೆಟ್ ಹಂಚಿಕೆ ವಿಚಾರದಲ್ಲಿ 24,974 ಕೋಟಿ ರೂ.ಗಳಿಂದ 26,474 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ರಾಜ್ಯ ಸಾಲದ ಚಕ್ರದಲ್ಲಿ ಸಿಲುಕಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಗ್ಯಾರಂಟಿ ಯೋಜನೆಗಳ ಹೊರತಾಗಿ, ಸಮಾಜದ ಕೆಲವು ವರ್ಗಗಳನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯ ಹಾಗೂ ಅದರ ಹಣಕಾಸಿನ ಮೇಲೆ ಹೊರೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.





