ಮೈಸೂರು: ಕೃತಕ ಬುದ್ಧಿಮತ್ತೆಯು ಇಂದು ವೇಗವಾಗಿ ಬೆಳೆಯುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕು ಎಂದು ಎನ್‌ಐಇ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ.ನರಸಿಂಹ ಕೌಲಗೂಡು ತಿಳಿಸಿದರು.
ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐಟೆಕ್ನರಿ ರಾಜ್ಯಮಟ್ಟದ ಒಂದು ದಿನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನವು ಆಧುನಿಕ ಭಾರತದ ಅಭಿವೃದ್ಧಿಗೆ ಪೂರಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ನಾಗರಿಕತೆ ಬೆಳೆದಂತೆ ಮಾನವನ ಆಲೋಚನಾ ಶಕ್ತಿಯು ಹೊಸ ನಾವೀನ್ಯತೆಯನ್ನು ಪಡೆದು ಮಾನವನ ಶಕ್ತಿ ಸಾಮರ್ಥ್ಯವನ್ನು ಉದ್ದೀಪನಗೊಳಿಸುತ್ತಿದೆ. ಇಂದಿನ ವಿಜ್ಞಾನ ಯುಗವು ಕೃಷಿ, ತೋಟಗಾರಿಕೆ ಸೇರಿದಂತೆ ಕೈಗಾರಿಕೆ, ನೀರಾವರಿ, ಖಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ದೂರ ಸಂಪರ್ಕ ವೈದ್ಯಕೀಯ, ಕಂಪ್ಯೂಟರ್ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಮಾತನಾಡಿ, ನಾಗರಿಕತೆ ಬೆಳೆದಂತೆ ಆಧುನಿಕ ಆವಿಷ್ಕಾರಗಳು ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೊಳ್ಳುತ್ತಿದೆ. ಬೀಸೋಕಲ್ಲು, ಒನಕೆ, ಕೃಷಿ ಪರಿಕರಗಳ ಬಳಕೆಯಿಂದ ಪ್ರಾರಂಭಗೊಂಡ ತಂತ್ರಜ್ಞಾನವು ಇಂದು ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ನಿತ್ಯವೂ ಅಭಿವೃದ್ಧಿಗೊಳ್ಳುತ್ತಿದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ ಎಂದರು.
ಮೈಸೂರು ನಗರದ ವಿವಿಧ ಕಾಲೇಜುಗಳಿಂದ ೧೫೦ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ಎನ್.ಭಾರತಿ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಪ್ರೊ.ಕೆ.ಎಸ್.ಸುಕೃತ, ಮುಖ್ಯಸ್ಥರಾದ ಪ್ರೊ.ಚೈತ್ರ, ಪ್ರೊ.ಪವಿತ್ರ, ಅಧ್ಯಾಪಕರಾದ ಪಲ್ಲವಿ ಅಂಗಡಿ, ನಿಹಾರಿಕ ಜೈನ್, ಹೇಮಾ ಮತ್ತಿತರರು ಹಾಜರಿದ್ದರು.