ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ನಿರ್ದೇಶನ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಜನವರಿ 2 ರಂದು ಲಲಿತಾ ಸಹಸ್ರನಾಮ ಕಾರ್ಯಕ್ರಮ, ಜನವರಿ 3 ಹಾಗೂ 4 ರಂದು ವಾರಾಂತ್ಯವಿದ್ದು, ದರ್ಶನಕ್ಕೆ ಬರುವ ಭಕ್ತಾದಿಗಳ ನೂಕು ನುಗ್ಗಲು ಉಂಟಾಗದಂತೆ ಸರದಿ ಸಾಲುಗಳನ್ನು ಹೆಚ್ಚಿಗೆ ಮಾಡುವಂತೆ ತಿಳಿಸಿದರು.
ಸುಗಮ ವಾಹನ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಹೆಚ್ಚಿನ ಜನದಟ್ಟಣೆ ಉಂಟಾದ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸಹ ಮಹಿಷಾಸುರ ಪ್ರತಿಮೆಯ ಬಳಿ ನಿಲ್ಲಿಸಿ ನಂತರ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡುವುದು ಉತ್ತಮ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕುಡಿಯುವ ನೀರಿನ ವ್ಯವಸ್ಥೆಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಮಾಡಿ. ಸ್ವಚ್ಛತೆ ಕಪಾಡಲು ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಗಳನ್ನು ನಿಯೋಜಿಸಿ. ಕೆಎಸ್ಆರ್ ಟಿಸಿ ನಗರ ವಿಭಾಗದಿಂದ ಹೆಚ್ಚಿನ ಬಸ್ ಟ್ರಿಪ್ ಗಳನ್ನು ಮಾಡುವಂತೆ ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಎರಡು ಅಂಬ್ಯೂಲೆನ್ಸ್ ನ್ನು ನಿಯೋಜಿಸಬೇಕು ಹಾಗೂ ದಾನಿಗಳು ನೀಡುವ ಆಹಾರ ಪದಾರ್ಥಗಳಲ್ಲಿ ದಸೋಹ ಭವನದಲ್ಲಿ ಪ್ರಸಾದ ಸಿದ್ಧಪಡಿಸಿದರೂ ನೀಡಿರುವ ಆಹಾರ ಪದರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ, ದೇವಸ್ಥಾನದ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





