ಮೈಸೂರು : ದೇಶದಲ್ಲಿ ಜನಸಂಖ್ಯೆಯದ್ದೇ ದೊಡ್ಡ ಸಮಸ್ಯೆಯಾಗಿದ್ದು, ದೇಶ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಿ ಎಷ್ಟೇ ಅಭಿವೃದ್ಧಿಯಾದರೂ ಅದನ್ನು ಜನಸಂಖ್ಯೆ ಅದನ್ನು ತಿನ್ನುತ್ತಿದೆ. ಹಾಗಾಗಿ, ನಾವು ಜನಸಂಖ್ಯೆ ನಿಯಂತ್ರಣದ ಕಡೆಗೆ ಹೆಚ್ಚು ಗಮನ ನೀಡುವುದು ಅಗತ್ಯವಿದೆ ಎಂದು ಮಾಜಿ ಸಚಿವರೂ ಆದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಮಾತನಾಡಿದ ಅವರು, ನೂತನ ಸತಿ, ಪತಿಗಳು ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ನಂಬಿಕೆ ಇಡಬೇಕು. ಒಂದು ಅಥವಾ ಎರಡು ಮಕ್ಕಳು ಸಾಕು ಎಂಬ ನಿರ್ಧಾರ ಮಾಡಬೇಕು. ಆಗ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೊತೆಗೆ ನಿಮಗೂ ಉಜ್ವಲ ಭವಿಷ್ಯ ಇರುತ್ತದೆ ಎಂದು ಕಿವಿಮಾತು ಹೇಳಿದರು.
ಬಡತನ, ನಿರುದ್ಯೋಗ ಸಮಸ್ಯೆಗಳು ಸಮಾಜದಿಂದ ಹೋಗಬೇಕು. ಇವುಗಳನ್ನು ಹೋಗಲಾಡಿಸಲು ಎಲ್ಲರೂ ನಿರಂತರವಾದ ಹೋರಾಟ ಮಾಡಬೇಕು. ಮುಖ್ಯವಾಗಿ ರಾಷ್ಟ್ರದ ಜನಸಂಖ್ಯೆ ಕಡಿಮೆಯಾಗಬೇಕು. ಹುಟ್ಟಿದ ಮಗು ಆರೋಗ್ಯವಾಗಿ ಇರಬೇಕು. ಚೆನ್ನಾಗಿ ಬೆಳೆಯಬೇಕು. ವಿದ್ಯಾವಂತ ಆಗಬೇಕು ಎಂಬ ಗುರಿ ನಮ್ಮದಾಗಬೇಕು ಎಂದರು.
ಮದುವೆ ಎನ್ನುವುದು ಜೀವನದಲ್ಲಿ ಆಗುವ ಪವಿತ್ರ ಕಾರ್ಯ. ಅದು ಇಂದು ಶ್ರೀ ಸುತ್ತೂರು ಮಠದ ಪವಿತ್ರ ಕ್ಷೇತ್ರದಲ್ಲಿ ಗುರುಗಳ ಆಶೀರ್ವಾದದಿಂದ ಆಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದ ಎಲ್ಲರೂ ಗುರುಗಳ ಆಶೀರ್ವಾದದಿಂದ ಚೆನ್ನಾಗಿ ಬಾಳಬೇಕು. ಪ್ರೀತಿ, ವಿಶ್ವಾಸದಿಂದ ಇರಬೇಕು. ತಮ್ಮ ಕುಟುಂಬಕ್ಕೆ ಮತ್ತು ಇಡೀ ಸಮಾಜಕ್ಕೆ ಆದರ್ಶ ದಂಪತಿಗಳಾಗಬೇಕು ಎಂದರು.
ಸಾಮೂಹಿಕ ವಿವಾಹ ಮಾಡುವುದು ಪವಿತ್ರ ಮತ್ತು ಆದರ್ಶ ಕೆಲಸವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಎಷ್ಟೇ ಕೃತಜ್ಞತೆ ಹೇಳಿದರು ಕಡಿಮೆಯಾಗುತ್ತದೆ.ಇಂದು ಸಾಮೂಹಿಕ ಮದುವೆ ಎಲ್ಲೆಡೆ ಹೆಚ್ಚಾಗಿ ನಡೆಯಬೇಕು. ಆ ಮೂಲಕ ದುಂದು ವೆಚ್ಚ ಕಡಿಮೆ ಮಾಡುವ ಜೊತೆಗೆ ಹಣ ಉಳಿಸಿ ಉತ್ತಮ ಜೀವನ ನಡೆಸಬಹುದು ಎಂದರು.
ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. ದಾಸೋಹ, ಸಾಂಸ್ಕ ತಿಕ ಮೇಳ, ಗಾಳಿಪಟ ಮೇಳ, ಕೃಷಿ ಮೇಳ, ವಿಜ್ಞಾನ ವಸ್ತು ಪ್ರದರ್ಶನ,ದನಗಳ ಜಾತ್ರೆ ಸೇರಿದಂತೆ ಸಾರ್ವಜನಿಕರ ಜೀವನಕ್ಕೆ ಹತ್ತಿರವಾದ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದೆ. ೬ ದಿನಗಳು ನಡೆಯುವ ಜಾತ್ರೆಯ ಎಲ್ಲ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಅಕ್ಷರ ದಾಸೋಹವೂ ನಿರಂತವಾಗಿ ನಡೆಯುತ್ತಿದೆ.
ಶ್ರೀ ಮಠದ ಸುಮಾರು ೪೦೦ ವಿದ್ಯಾ ಸಂಸ್ಥೆಗಳು ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಕಲಿತಿರುವ ಲಕ್ಷಾಂತರ ಜನ ಜೀವನ ರೂಪಿಸಿಕೊಂಡಿದ್ದಾರೆ ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಜೊತೆಗೆ ಹಿಂದೆ ಇದ್ದ ಎಲ್ಲ ಸ್ವಾಮೀಜಿಗಳನ್ನು, ಅವರ ಸೇವೆಯನ್ನು ನಾವು ಸ್ಮರಿಸಬೇಕಾಗಿದೆ. ಸಾಮೂಹಿಕ ಮದುವೆಗಳಿಗೆ ಶ್ರೀ ಮಠ ಹೆಚ್ಚು ಒತ್ತು ನೀಡುತ್ತಿದೆ. ನಮ್ಮ ಸರ್ಕಾರವೂ ಒತ್ತು ನೀಡುತ್ತಿದೆ. ಇಂತಹ ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಶ್ರೀ ಮಠವು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಮುಖ್ಯವಾಗಿ ಗ್ರಾಮೀಣ ಜನರಿಗೆ, ರೈತರಿಗೆ ಎಲ್ಲ ಬಗೆಯ ಮಾಹಿತಿ ನೀಡುವ ದೃಷ್ಟಿಯಲ್ಲಿ ಕೃಷಿ ಮೇಳ ಆಯೋಜಿಸಿದೆ. ಜಾತ್ರೆಯಲ್ಲಿ ಎಲ್ಲ ಜಾತಿ, ಧರ್ಮದವರು ಭಾಗಿಯಾಗುತ್ತಿದ್ದಾರೆ. ಎಲ್ಲರಲ್ಲೂ ನಮ್ಮ ಜಾತ್ರೆ ಎಂಬ ಅಭಿಮಾನ ಹೊಂದಿದ್ದಾರೆ ಎಂದ ಅವರು, ದಾಸೋಹ, ಶಿಕ್ಷಕಣಕ್ಕೆ ಸುತ್ತೂರು ಶ್ರೀ ಮಠ ಹೆಚ್ಚಿನ ಒತ್ತು ನೀಡಿದೆ ಎಂದರು.
ಯುಎಸ್‌ಎಯ ಬಾಸ್ಟನ್ ಕನ್ಸಲ್ಟಿಂಗ್‌ನ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಳ್ಳಿ ಮಾತನಾಡಿ, ಜಾತ್ರಾ ಮಹೋತ್ಸವವು ಧಾರ್ಮಿಕ ಭಕ್ತಿ, ಭಾವದ ಜೊತೆಗೆ ಜನ ಜಾಗೃತಿ ಕೇಂದ್ರವಾಗಿದೆ. ನನ್ನಂತಹ ಅನೇಕರಿಗೆ ಸುತ್ತೂರು ಶ್ರೀ ಮಠ ಪ್ರೇರಣಾ ಶಕ್ತಿಯಾಗಿದೆ ಎಂದರು.
ಪಡಗೂರು ಅಡವಿಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ಧಾರ್ಮಿಕ ಉತ್ಸವ ಜೊತೆಗೆ ಸಾಮಾಜಿಕ ಸೇವೆಯ ಅನೇಕ ಕೆಲಸ ನಡೆಯುತ್ತಿದೆ. ನೂತನ ದಂಪತಿಗಳು ಪರಸ್ಪರ ನಂಬಿಕೆಯಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡಬೇಕು ಎಂದು ತಿಳಿಸಿದರು.
ಮೈಸೂರು ಬಿಷಪ್ ರೆ.ಫಾ.ಫ್ರಾನ್ಸಿಸ್ ಸೆರಾವ್ ಮಾತನಾಡಿ, ಜನ ಜಾಗೃತಿ ಮೂಡಿಸುವ ಸುತ್ತೂರಿನ ಇಂತಹ ಜಾತ್ರೆಗಳು ಹೆಚ್ಚು ನಡೆಯಬೇಕು. ಶ್ರೀ ಮಠ ಅನೇಕ ಬಡವರಿಗೆ ನೆರವಾಗಿದೆ. ಸಾವಿರಾರು ಜನರಿಗೆ ಜೀವನ ರೂಪಿಸಿಕೊಟ್ಟಿದೆ ಎಂದರು. ಸೇವೆಯೇ ಧರ್ಮದ ಮುಖ್ಯ ಉದ್ದೇಶವಾಗುತ್ತದೆ. ಆ ಉದ್ದೇಶವನ್ನು ಸುತ್ತೂರು ಮಠ ಪೂರೈಸಿದೆ ಎಂದರು. ಶಾಂತಿ, ಅನುಕಂಪ, ಪ್ರೀತಿ, ವಾತ್ಸಲ್ಯ ಇದ್ದ ಕಡೆ ದೇವರು ಇರುತ್ತಾನೆ ಎಂದರು. ಸಾನ್ನಿಧ್ಯವನ್ನು ಸುತ್ತೂರುಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಜಿ ವಹಿಸಿದ್ದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಅಲ್ಲಂವೀರಭದ್ರಪ್ಪ, ಸುತ್ತೂರುಶ್ರೀ ಮತ್ತಿತರರು ಹಾಜರಿದ್ದರು.





